ಕೊರೊನಾ ಮಹಾಮಾರಿಯ ನಿಯಂತ್ರಣಕ್ಕೆ ಸಾರ್ವಜನಿಕ ಸಭೆ ಸಮಾರಂಭಗಳಿಂದ, ಮದುವೆ ಮುಂತಾದ ಕಾರ್ಯಕ್ರಮಗಳಿಂದ ಸಾಧ್ಯವಾದಷ್ಟು ದೂರ ಇರಬೇಕು. ಸ್ಯಾನ್ಸಿಟೈಸೇಶನ್ ಮತ್ತು ಮಾಸ್ಕ್ ಬಳಕೆಯನ್ನು ನಮಗೆ ನಾವೇ ಕಡ್ಡಾಯ ಮಾಡಿಕೊಳ್ಳಬೇಕು ಎಂದು ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.

ಭಾರತ ಸೇವಾದಳ ಜಿಲ್ಲಾ ಘಟಕ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವೃತ್ತಿ ಶಿಕ್ಷಣ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ತಾಲ್ಲೂಕಿನ ಅಗಸಗಾ ಗ್ರಾಮದ ಆರ್.ಎ.ಪರ್ವತೆ ಪದವಿಪೂರ್ವ ಕಾಲೇಜ್‍ನಲ್ಲಿ ಕೊರೊನಾ ಜಾಗೃತಿ ಮತ್ತು ಆರೋಗ್ಯ ತರಬೇತಿ ಶಿಬಿರ ಹಾಗೂ ಮಾಸ್ಕ್, ಸ್ಯಾನಿಟೈಜರ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಹಾಗೂ ಉದ್ಯಮಿ ರಾಜೇಂದ್ರ ಮಾಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಇಂದು ನಿಧನರಾದ ನಾಡಿನ ಖ್ಯಾತ ಕವಿ ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಾರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತಿತರರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್‍ನ್ನು ವಿತರಿಸಲಾಯಿತು.
ಈ ವೇಳೆ ವಿಶೇಷ ಉಪನ್ಯಾಸಕರಾಗಿ ಭಾಗಿಯಾಗಿ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿದರು. ಕೊರೊನಾದಿಂದ ದೂರ ಉಳಿಯ ಬೇಕಾದರೆ ದಿನನಿತ್ಯದ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಎಸ್‍ಎಮ್‍ಎಸ್‍ಗಳನ್ನು ಅಂದರೆ ಆಗಾಗ ಸ್ಯಾನಿಟೈಸೇಶನ್ ಬಳಕೆ, ಕಡ್ಡಾಯವಾಗಿ ಮಾಸ್ಕ್ ಬಳಸಿ ಮತ್ತು ಸೋಶಿಯಲ್ ಡಿಸ್ಟೆನ್ಸ್‍ನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿ ಅಗತ್ಯ ಕಂಡಾಗ 3ಟಿಗಳನ್ನು ಅಂದರೆ ಕೊರೊನಾದ ಲಕ್ಷಣಗಳು ಕಂಡುಬಂದರೆ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಬೇಕು, ಅಕಸ್ಮಾತ್ ಪಾಸಿಟಿವ್ ಎಂದು ಕಂಡು ಬಂದರೇ ತಕ್ಷಣ ಟ್ರೀಟ್ಮೆಂಟ್ ಪಡೆದುಕೊಳ್ಳಬೇಕು ಮತ್ತು ಕಡ್ಡಾಯವಾಗಿ ಏಳರಿಂದ ಹತ್ತು ದಿವಸ ಐಸೊಲೇಷನ್‍ನಲ್ಲಿ ಇರಬೇಕು ಮತ್ತು ಮೂರನೆಯ ಟಿ ಅಂದರೆ ಟ್ರ್ಯಾಕ್ ಹಿಸ್ಟರಿ ತಿಳಿದುಕೊಂಡು ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಎಂದರು. ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು. ಅದೇ ರೀತಿ ಈಗ ನೀಡಲಾಗುತ್ತಿರುವ ಬೂಸ್ಟರ್ ಡೋಸ್‍ನ್ನು ಅಗತ್ಯವಿರುವವರಿಗೆ ಕೊಡಿಸಬೇಕು. ಇನ್ನು ಹಳ್ಳಿಗಳು ಸುರಕ್ಷಿತವಾಗಿದ್ದರೆ ಮಾತ್ರ ಬಲಿಷ್ಠ ಭಾರತ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಾಚಾರ್ಯ ಕೆ.ಬಿ.ಹಿರೇಮಠ, ಆಡಳಿತ ಮಂಡಳಿ ಅಧ್ಯಕ್ಷ ಅಮೃತ್ ಮುದ್ದಣ್ಣವರ, ಪತ್ರಕರ್ತ ಮುರುಗೇಶ್ ಶಿವಪೂಜಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕವಿತಾ ಕುಂಬಾರ, ಹಂದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಎಂ.ಹುಸೇನ್, ಭಾರತ ಸೇವಾ ದಳದ ರಾಜ್ಯ ಉಪ ದಳಪತಿ ಬಸವರಾಜ ಹಟ್ಟಿಗೌಡರ ಸೇರಿ ಇನ್ನಿತರರು ಉಪಸ್ಥಿತರಿದ್ದರು.