State

ಈಶ್ವರಪ್ಪ ದೊಡ್ಡ ಹಿರೋ ತರಹ ವರ್ತಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್ ವಾಗ್ದಾಳಿ

Share

ಈಶ್ವರಪ್ಪ ಮಾಡಿದ್ದು ಸಣ್ಣ ತಪ್ಪು ಅಲ್ಲ, ಆ ವಿಚಾರದಲ್ಲಿ ಅದು ಆಗಿದ್ದ ತಕ್ಷಣವೇ ತಪ್ಪು ಮಾಡಿದ್ದೇನೆ ಎಂದು ಕ್ಷಮೆ ಕೇಳಿದ್ದರೆ ಹಾಗೂ ಬಿಜೆಪಿಯವರು ಅವರ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರೆ ಬಿಡಬಹುದಾಗಿತ್ತು. ಆದರೆ ಅವರ ಮೊಂಡುತನ, ಅವರ ನಡುವಳಿಕೆ ಅತ್ಯಂತ ಖಂಡನೀಯ. ಹೀಗಾಗಿ ಈಶ್ವರಪ್ಪ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ದಿನೇಶ್ ಗುಂಡೂರಾವ್ ದೇಶಭಕ್ತಿ, ದೇಶದ ಗೌರವದ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈಶ್ವರಪ್ಪನವರು ದೊಡ್ಡ ಹಿರೋ ರೀತಿ, ಏನೋ ಬಹಳ ದೊಡ್ಡ ಸಾಧನೆ ಮಾಡಿದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಾನು ಏನೂ ತಪ್ಪೇ ಮಾಡಿಲ್ಲ ಎನ್ನುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡ ಈಶ್ವರಪ್ಪ ಏನು ತಪ್ಪು ಮಾಡಿದ್ದಾರೆ ಎಂದು ಅವರ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇಂದು ಬಿಜೆಪಿ ಡೋಂಗಿತನದಿಂದ ಅಧಃಪತನಕ್ಕೆ ಹೋಗಿದೆ ಎಂದು ಸ್ಪಷ್ಟವಾಗಿ ಗೋಚರವಾಗಿದೆ. ಇವರು ಬರೀ ವೋಟ್‍ಗೋಸ್ಕರ ಜನರ ಮುಂದೆ ಧರ್ಮದ ಹೆಸರನ್ನು ಉಪಯೋಗ ಮಾಡುತ್ತಾರೆ ಹೊರತು ಕ್ರಿಯೆಯಲ್ಲಿ ಯಾವುದೂ ಕೂಡ ಅನುಷ್ಠಾನಕ್ಕೆ ತರೋದಿಲ್ಲ. ಅತ್ಯಂತ ಭ್ರಷ್ಟರು, ಸುಳ್ಳು ಹೇಳುವವರು, ಕೆಳಮಟ್ಟದ ರಾಜಕಾರಣ ಮಾಡುವವರು ಬಿಜೆಪಿಯವರು ಎಂದು ಕಿಡಿಕಾರಿದರು.

ನಮ್ಮ ದೇಶದ ಸಂಕೇತ ರಾಷ್ಟ್ರಧ್ವಜದ ಬಗ್ಗೆ ಗೌರವ ಕೊಡುವ ಕೆಲಸವನ್ನು ಮಾಡದೇ ಅಂತವರ ಬಗ್ಗೆ ಅವರು ಏನೂ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ ಇವರ ನಿಜವಾದ ಬಣ್ಣ ಜನರ ಮುಂದೆ ಬಯಲಾಗುತ್ತಿದೆ. ಯಾವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟವಾಗಿ ಜನರಿಗೆ ಅರ್ಥವಾಗುತ್ತಿದೆ. ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಇನ್ನು ಸಚಿವ ಈಶ್ವರಪ್ಪ ವಿರುದ್ಧ ಧರಣಿ ಮುಂದುವರಿಯುತ್ತದೆ, ಒಂದು ತತ್ವದ ಮೇಲೆ ಮಾಡುತ್ತಿದ್ದೇವೆ. ಓರ್ವ ವ್ಯಕ್ತಿ ಆಡಿರುವ ಮಾತುಗಳಲ್ಲಿ ಆರ್‍ಎಸ್‍ಎಸ್ ಅಜೆಂಡಾ ಇದೆ. ಈ ದೇಶದ ಧ್ವಜದ ಬಗ್ಗೆ ಗೌರವ ಇಲ್ಲ. ವೈವಿದ್ಯಮಯ ದೇಶದಲ್ಲಿ ಆ ರೀತಿ ಇರಬೇಕು ಎಂಬುದು ಇಲ್ಲ. ಅವರ ಅಜೆಂಡಾ ಏನು ಎಂಬುದು ಗೊತ್ತಾಗುತ್ತಿದೆ. ಹೀಗಾಗಿ ಆ ಅಜೆಂಡಾಗೆ ನಮ್ಮ ಸಂಪೂರ್ಣ ವಿರೋಧವಿದೆ. ಆದ್ದರಿಂದ ಹೋರಾಟ ಮುಂದುವರಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

Tags:

error: Content is protected !!