ಕೋವಿಡ್ ವ್ಯಾಕ್ಸಿನ್ ಇತರ ದೇಶಗಳಿಗಿಂತ ಗುಣಮಟ್ಟದಲ್ಲಿ ಭಾರತದಲ್ಲಿಯೇ ತಯಾರಾಗಿ, ಇಂದು ದೇಶದ ಜನತೆಗೆ ಯಶಸ್ವಿಯಾಗಿ ಕೊಡುತ್ತಿದ್ದೇವೆ ಎಂದರೆ ಅದಕ್ಕೆ ಪ್ರಧಾನಿ ಮೋದಿ ಅವರ ನಾಯಕತ್ವ, ಅವರ ಮೇಲಿರುವ ಭರವಸೆ, ವಿಶ್ವಾಸಾರ್ಹತೆ ಹಾಗೂ ಎಲ್ಲ ಆರೋಗ್ಯ ಕಾರ್ಯಕರ್ತರ ಶ್ರಮವೇ ಕಾರಣ ಎಂದು ಸಿಎಂ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಮವಾರ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಅವರು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್, ಬೂಸ್ಟರ್ ಡೋಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಅಮೆರಿಕಾ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಮುಂದುವರಿದಿರುವ ದೇಶ, ಆರೋಗ್ಯದ ಬಗ್ಗೆ ಕಾಳಜಿ ಇರುವ ಸರ್ಕಾರ ಮತ್ತು ಸಮಾಜ ಇದ್ದರೂ ಕೂಡ ಅವರಿಗೆ ವ್ಯಾಕ್ಸಿನೇಶನ್ ಮಾಡಲು ಸಾಧ್ಯ ಆಗಲಿಲ್ಲ. ನಮ್ಮದು 130 ಕೋಟಿ ಜನಸಂಖ್ಯೆ ಇರುವ ದೊಡ್ಡ ದೇಶದಲ್ಲಿ ವ್ಯಾಕ್ಸಿನೇಶನ್ ಮಾಡುವುದು ಸುಲಭ ಆಗಿರಲಿಲ್ಲ. ಆದರೂ ಅಮೆರಿಕಾದ ಮೂರು ಪಟ್ಟು ನಮ್ಮಲ್ಲಿ ಲಸಿಕಾಕರಣ ಆಗಿದೆ. ಇದಕ್ಕೆ ಪ್ರಧಾನಿ ಮೋದಿ ಹಾಗೂ ಆರೋಗ್ಯ ಕಾರ್ಯಕರ್ತರು ಕಾರಣ; ಇನ್ನು ರಾಜ್ಯದಲ್ಲಿ ಈಗಾಗಲೇ ಲಸಿಕಾಕರಣದಲ್ಲಿ ಶೇ.99ರಷ್ಟು ಸಾಧನೆ ಮಾಡಿದ್ದೇವೆ. ಜನವರಿ 31ರೊಳಗೆ ಶೇ.100ರಷ್ಟು ಲಸಿಕಾಕರಣ ಮಾಡುವಂತೆ ತಿಳಿಸಿದ್ದೇನೆ. ಸಣ್ಣ ರಾಜ್ಯ ಬಿಟ್ಟರೆ ಬೇರೆ ದೊಡ್ಡ ರಾಜ್ಯಗಳು ನಮ್ಮಷ್ಟು ಸಾಧನೆ ಮಾಡಿಲ್ಲ. ಸುಧಾಕರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಬಹಳ ಒಳ್ಳೆಯ ಕೆಲಸ ಮಾಡಿದೆ. ಅದೇ ರೀತಿ 60 ವರ್ಷದ ನಂತರ ಮತ್ತು ಕೋವಿಡ್ ವಾರಿಯರ್ಸಗೆ ಬೂಸ್ಟರ್ ಡೋಸ್ ನೀಡುವ ಅಭಿಯಾನವನ್ನು ಯಶಸ್ವಿಗೊಳಿಸಿ, ಕರ್ನಾಟಕವನ್ನು ಕೋವಿಡ್ ಸುರಕ್ಷತಾ ಚಕ್ರವನ್ನು ಕರ್ನಾಟಕಕ್ಕೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಇನ್ನು ಕೋವಿಡ್ ಸಂದರ್ಭದಲ್ಲಿ ಮನೆ ಬಾಗಿಲಿಗೆ ಹೋದಾಗ ಒಂದಿಷ್ಟು ಜನರು ಏನೇನೋ ಮಾತನಾಡಿದ್ದಾರೆ. ಆದರೆ ನಮ್ಮ ಆರೋಗ್ಯ ಕಾರ್ಯಕರ್ತೆಯರು ಅದ್ಯಾವುದನ್ನು ಲೆಕ್ಕಿಸದೇ ಸಾಮಾನ್ಯ ಆಶಾ ಕಾರ್ಯಕರ್ತೆಯರಿಂದ ಹಿಡಿದು ವೈದ್ಯರು, ನರ್ಸಗಳು ಎಲ್ಲರೂ ಅಮೋಘವಾದ ಸೇವೆ ಸಲ್ಲಿಸಿದ್ದಾರೆ. ನಿಜವಾದ ಸೇವಕರು, ನಮ್ಮ ದೇಶದ ನಿಜವಾದ ರಕ್ಷಕರು ನೀವು, ಪ್ರತಿಯೊಂದು ಕುಟುಂಬವನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದಿರಿ. ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಪುಣ್ಯ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.