Belagavi

ಟ್ರೇಡ್ ಟ್ಯಾಕ್ಸ್, ಟ್ರೇಡ್ ಲೈಸೆನ್ಸ್ ನಿಯಮಗಳಿಗೆ ವಿರೋಧ: ವರ್ತಕರಿಂದ ಪಾಲಿಕೆ ಆಯುಕ್ತರಿಗೆ ಮನವಿ

Share

ಬೆಳಗಾವಿ ಮಹಾನಗರ ಪಾಲಿಕೆಯಿಂದ ವ್ಯಾಪಾರೋದ್ಯಮಿಗಳಿಗೆ ಹೊಸದಾಗಿ ಟ್ರೇಡ್ ಟ್ಯಾಕ್ಸ್ ವಿಧಿಸಿರುವುದನ್ನು ವಿರೋಧಿಸಿ ಬೆಳಗಾವಿ ಜಿಲ್ಲಾ ಕಂಜ್ಯೂಮರ್ಸ್ ಡಿಸ್ಟ್ರಿಬ್ಯೂಷನ್ಸ್ ಅಸೋಸಿಯೇಷನ್ ಮುಖಂಡರು ಸಭೆ ನಡೆಸಿ ಚರ್ಚಿಸಿದರು. ನಂತರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಸೋಮವಾರ ಸಭೆ ನಡೆಸಿದ ಗಣಪತಿ ಗಲ್ಲಿ, ಖಡೇ ಬಜಾರ್, ಬಾಪಟ್ ಗಲ್ಲಿ, ಮೆಣಸಿ ಗಲ್ಲಿ, ಪಾಂಗೂಳ ಗಲ್ಲಿ ವರ್ತಕರು, ಮಹಾನಗರ ಪಾಲಿಕೆಯಿಂದ ಹೊಸದಾಗಿ ಟ್ರೇಡ್ ಟ್ಯಾಕ್ಸ್ ವಿಧಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ಕುರಿತು ಮಹಾನಗರ ಪಾಲಿಕೆಯಿಂದ ವರ್ತಕರಿಗೆ ನೋಟಿಸ್ ಜಾರಿಗೊಳಿಸಿರುವುದನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಟ್ರೇಡ್ ಲೈಸೆನ್ಸ್ ನೀಡಲು ಹಲವು ನಿಯಮ ಪಾಲನೆಗೆ ಸೂಚಿಸಿರುವುದನ್ನು ಖಂಡಿಸಿ, ಲೈನಸ್ಸ್ ನೀಡಿಕೆ ಸರಳಗೊಳಿಸಬೇಕೆಂದು ಆಗ್ರಹಿಸಿದರು. ನಂತರ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ವೇಳೆ ಶಾಸಕ ಅನಿಲ ಬೆನಕೆ ಮಾತನಾಡಿ, 1976ರ ವಾಣಿಜ್ಯ ಪರವಾನಗಿ ಕಾಯ್ದೆ ಸೆಕ್ಷನ್ 353 ಪ್ರಕಾರ ವಾಣಿಜ್ಯ ತೆರಿಗೆ ಆಕರಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಇದರಲ್ಲಿ ಹಿಂದಿನ ವರ್ಷಗಳ ತೆರಿಗೆಯನ್ನೂ ಸೇರಿಸಿ ಹಣ ವಸೂಲಿಗೆ ಉದ್ದೇಶಿಸಲಾಗಿದೆ. ಇನ್ನು ಟ್ರೇಡ್ ಲೈಸೆನ್ಸ್ ನೀಡಲು ಅಕ್ಕಪಕ್ಕದವರ ಎನ್‍ಒಸಿ, ಬಾಂಡ್, ಜಿಎಸ್‍ಟಿ ಸಹಿತ ಹಲವು ದಾಖಲೆಗಳನ್ನು ಕೇಳಲಾಗುತ್ತಿದೆ. ಆದರೆ ಟ್ರೇಡ್ ಲೈಸೆನ್ಸ್‍ಗೆ ಇದಾವುದರ ಉಸಾಬರಿಯೂ ಬೇಡ. ಬದಲಾಗಿ ಪಾನ್ ಕಾಡ, ಆಧಾರ್ ಕಾರ್ಡ್ ಇದ್ದರೆ ಸಾಕು ಎಂಬುದು ವ್ಯಾಪಾರಿಗಳ ವಾದವಾಗಿದೆ. ಇದನ್ನು ತಿಳಿಸಲು ವ್ಯಾಪಾರಿಗಳು ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇನ್ನು ವರ್ತಕರಿಗೆ ತೊಂದರೆಯಾಗದಂತೆ, ವಿನಾಕಾರಣ ಕಿರುಕುಳ ಎನಿಸದಂತೆ ಕ್ರಮ ಕೈಗೊಳ್ಳಬೇಕೆಂದು ನಾನು ಕೂಡ ಆಯುಕ್ತರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಈ ವೇಳೆ ಬೆಳಗಾವಿ ಜಿಲ್ಲಾ ಕಂಜ್ಯೂಮರ್ಸ್ ಡಿಸ್ಟ್ರಿಬ್ಯೂಷನ್ಸ್ ಅಸೋಸಿಯೇಷನ್ ಅಧ್ಯಕ್ಷ ಸಂಜಯ ಗೋಟಡಕಿ ಮಾತನಾಡಿ, ಈಗಾಗಲೇ 5 ಪ್ರಕಾರದ ತೆರಿಗೆ ಭರಿಸುತ್ತಿದ್ದೇವೆ. ಮೇಲಾಗಿ ದಾವಣಗೆರೆ, ಬೆಂಗಳೂರು, ಹುಬ್ಬಳ್ಳಿ ಸೇರಿ ರಾಜ್ಯದ ಎಲ್ಲೂ ಇಲ್ಲದ ಟ್ರೇಡ್ ಲೈಸರ್ನ್ ಮತ್ತು ತೆರಿಗೆಯನ್ನು ಬೆಳಗಾವಿಯಲ್ಲಿ ವಿಧಿಸಲಾಗುತ್ತಿದೆ. ಇದು ಅನ್ಯಾಯದ ಪರಮಾವಧಿ. ಇದನ್ನು ವಿರೋಧಿಸಿ ನಾವು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಈ ವೇಳೆ ಬೆಳಗಾವಿ ಜಿಲ್ಲಾ ಕಂಜ್ಯೂಮರ್ಸ್ ಡಿಸ್ಟ್ರಿಬ್ಯೂಷನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಪದ್ಮಪ್ರಸಾದ ಹೂಲಿ ಮಾತನಾಡಿ, ವಾಣಿಜ್ಯ ತೆರಿಗೆ, ವಾಣಿಜ್ಯ ಪರವಾನಗಿ ಈ ಎರಡೂ ವರ್ತಕರಿಗೆ ಬೇಡವಾದವುಗಳು. ಈ ತೆರಿಗೆ, ಪರವಾನಗಿ ಏಕೆ, ಹೇಗೆ ಎಂದು ತಿಳಿಸಲು ಮಹಾನಗರ ಪಾಲಿಕೆಯಲ್ಲಿ ಸೂಕ್ತ ವ್ಯವಸ್ಥೆಯೇ ಇಲ್ಲ. ಅದಕ್ಕಾಗಿ ಮಾಹಿತಿ ಡೆಸ್ಕ್‍ನ್ನು ಪಾಲಿಕೆಯಲ್ಲಿ ಆರಂಭಿಸಬೇಕು. ಪಾಲಿಕೆಯಿಂದ ವರ್ತಕರ ಮೇಲೆ ದಬ್ಬಾಳಿಕೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ನಿಯಮಗಳು ಮತ್ತು ಟ್ರೇಡ್ ಟ್ಯಾಕ್ಸ್‍ಗೆ ವರ್ತಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

 

 

Tags:

error: Content is protected !!