ಬೆಳಗಾವಿ ಕಣಬರಗಿಯ ಸರ್ವೇ ನಂ.423/1ರಲ್ಲಿ ಇರುವ ಖುಲ್ಲಾ ಜಾಗೆಯನ್ನು ಅತಿಕ್ರಮಿಸಿಕೊಂಡು, ಜಾಗೆಯ ಮಾಲೀಕರ ವಿರುದ್ಧವೇ ಮೂವರು ಹಲ್ಲೆ ನಡೆಸಿದ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2005ರಲ್ಲಿ ಖರೀದಿಸಿದ ಈ ಜಾಗೆಯನ್ನು ಬೇರೊಬ್ಬರು ಅತಿಕ್ರಮಣ ಮಾಡಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆಂದು ಜಾಗೆಯ ಮಾಲೀಕ ಇಂದಿರಾ ಭೀಮಪ್ಪ ನರಸಗೋಳ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಕಣಬರಗಿಯ ಸರ್ವೇ ನಂ.423/1ರ ಜಾಗೆ ಈಗ ವಿವಾದಕ್ಕೆ ಈಡಾಗಿದೆ. 2005ರಲ್ಲಿ ಮಿಲಟರಿಯಲ್ಲಿರುವ ನನ್ನ ಪತಿ ಭೀಮಪ್ಪ ನರಸಗೋಳ ಅವರು ಖರೀದಿಸಿದ ಈ ಜಾಗೆಯನ್ನು ಬೇರೊಬ್ಬರು ಅತಿಕ್ರಮಣ ಮಾಡಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.
ಜಾಗೆಯ ಬಳಿ ಹೋದಾಗ ಮುರುಘೇಂದ್ರಗೌಡ ಪಾಟೀಲ, ಬಸವರಾಜ ಯಳ್ಳೂರಕರ, ಬಾಹುಬಲಿ ವೀರಗೌಡ ಎಂಬುವವರು ನನ್ನ ಮಗನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ನಮ್ಮ ಜಾಗೆಯನ್ನು ನಮಗೆ ಕೊಡಿಸಿ ಎಂದು ಜಾಗೆಯ ಮಾಲೀಕ ಇಂದಿರಾ ಭೀಮಪ್ಪ ನರಸಗೋಳ ಮಾಳಮಾರುತಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಈ ಸಮಸ್ಯೆಯನ್ನು ಬಗೆಹರಿಸುವ ಬದಲು ಒಪ್ಪಂದ ಮಾಡಿಕೊಳ್ಳುವಂತೆ ದೂರು ನೀಡಿದವರಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಈ ವೇಳೆ ಮಗ ವಿಜಯ ನರಸಗೋಳ ಮೇಲೆ ನಡೆಸಿದ ಹಲ್ಲೆಯಿಂದ ಆದ ಗಾಯಗಳನ್ನು ಮಹಿಳೆ ತೋರಿಸಿದರು.
ಈ ವೇಳೆ ಜಾಗೆಯ ಮಾಲೀಕ ಇಂದಿರಾ ನರಸಗೋಳ ಮಾತನಾಡಿ, ನಾವು ಜಾಗೆಯನ್ನು 2005ರಲ್ಲಿ ಖರೀದಿ ಮಾಡಿದ್ದೆವು. ಈಗ ಬೇರೆ ಯಾರೋ ಅತಿಕ್ರಮಣ ಮಾಡಿ ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ. ನನ್ನ ಮಗನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಆದರೆ ಈ ಬಗ್ಗೆ ದೂರಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ವೇಳೆ ಜಾಗೆ ಮಾಲೀಕರ ಮಗ ವಿಜಯ ಭೀಮಪ್ಪ ನರಸಗೋಳ ಮಾತನಾಡಿ, ನನ್ನ ತಂದೆ 2005ರಲ್ಲಿ ಜಾಗ ಖರೀದಿಸಿದ್ದಾರೆ. ಆದರೆ ನಮ್ಮ ಜಾಗೆಯಲ್ಲೇ ಬಂದು ನಮ್ಮ ಮೇಲೆಯೇ ಮೂವರು ಹಲ್ಲೆ ನಡೆಸುತ್ತಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ಜಾಗೆ ಅತಿಕ್ರಮಿಸಿಕೊಂಡದ್ದೂ ಅಲ್ಲದೇ ಮಾಲೀಕರ ಮೇಲೆ ಹಲ್ಲೆ ನಡೆಸುತ್ತಿರುವ ವ್ಯಕ್ತಿಗಳ ಬಗ್ಗೆ ಮಾಳಮಾರುತಿ ಪೊಲೀಸರ ಮೃದು ಧೋರಣೆ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.