ಕೇಂದ್ರ ಮತ್ತು ರಾಜ್ಯ ಸರಕಾರಗಳು ದಲಿತ ವಿರೋಧಿ, ರೈತ ವಿರೋಧಿ ನೀತಿ ಕೈಬಿಡದಿದ್ದರೆ ದಲಿತರ ಹೋರಾಟ ತೀವ್ರಗೊಳ್ಳಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಬೆಳಗಾವಿಯಲ್ಲಿ ಎಚ್ಚರಿಕೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ದಲಿತ, ರೈತ ವಿರೋಧಿ ನೀತಿ ಖಂಡಿಸಿ ಬೆಳಗಾವಿಯ ಡಾ.ಅಂಬೇಡ್ಕರ್ ಗಾರ್ಡ್ನ್ನಲ್ಲಿ . ಪ್ರತಿಭಟನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಸಿದ್ದಣ್ಣ ಕಾಂಬಳೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಕೈಬಿಡಬೇಕು. ರಾಜ್ಯದಲ್ಲಿ ಸುಮಾರು 4.5 ಲಕ್ಷ ಎಕರೆಯಲ್ಲಿ ಎಸ್ಸಿ ಎಸ್ಟಿ ಸಮುದಾಯದವರು ಭೂಮಿ ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ.
ಭೂ ಸುಧಾರಣೆ ಕಾಯ್ದೆ ಮೂಲಕ ಕಾರ್ಪೋರೆಟ್ ಸಂಸ್ಥೆಗಳು ಮತ್ತು ರಿಯಲ್ ಎಸ್ಟೇಟ್ನವರಿಗೆ ಅನುಕೂಲ ಮಾಡಿಕೊಡಲು ಸರಕಾರ ಹೊರಟಿದ್ದು, ರೈತರ ಭೂಮಿಯನ್ನು ಪರಭಾರೆ ಮಾಡುವ ಸಾಧ್ಯತೆಗಳಿವೆ. ಹಲವಾರು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿರುವವರಿಗೆ ಸರಕಾರ ಭೂಮಿ ಹಸ್ತಾಂತರಿಸಬೇಕು. ಇನ್ನು ಮುಚ್ಚಿರುವ ಶಾಲೆಗಳನ್ನು ಕೂಡಲೇ ತೆರೆದು ದಲಿತ ಸಮುದಾಯ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಾವಳ್ಳಿ ಶಂಕರ, ಗೌತಮ ಪಾಟೀಲ, ಕೆಂಪಣ್ಣ ಕಾಂಬಳೆ, ಜಿತೇಂದ್ರ ಕಾಂಬಳೆ ಮತ್ತಿತರರು ಇದ್ದರು.