Belagavi

ರಾಷ್ಟ್ರೀಯ ಶಿಕ್ಷಣ ನೀತಿ, ಕೋವಿಡ್ ನಂತರ ಶಿಕ್ಷಣ ಕ್ಷೇತ್ರದ ಸಮಸ್ಯೆ, ಸವಾಲು: ಪ್ರಾಚಾರ್ಯರ ಸಭೆಯಲ್ಲಿ ಗಂಭೀರ ಚರ್ಚೆ

Share

ಬೆಳಗಾವಿಯಲ್ಲಿ ಎಜ್ಯೂಕೇಶನ್ ಇಂಡಿಯಾ ಸಂಸ್ಥೆಯಿಂದ ಭಾನುವಾರ ಪ್ರೌಢ ಶಾಲೆಗಳ ಪ್ರಾಚಾರ್ಯರ ವಿದ್ವತ್ ಸಭೆಯನ್ನು ಏರ್ಪಡಿಸಲಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಕೋವಿಡ್ ನಂತರದ ಶಿಕ್ಷಣದ ಸ್ಥಿತಿಗತಿ ವಿಷಯವಾಗಿ ಬೆಳಗಾವಿ ಜಿಲ್ಲೆಯ ಪ್ರಾಚಾರ್ಯರಿಗೆ ತಿಳಿವಳಿಕೆ ನೀಡುವ ಜೊತೆಗೆ ಬದಲಾವಣೆಗೆ ತೆರೆದುಕೊಂಡಿರುವ ಶಿಕ್ಷಣ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ಈ ವೇಳೆ ಚರ್ಚಿಸಲಾಯಿತು.

ಬೆಳಗಾವಿಯಲ್ಲಿ ಎಜ್ಯೂಕೇಶನ್ ಇಂಡಿಯಾ ಸಂಸ್ಥೆಯಿಂದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬೆಳಗಾವಿ ಜಿಲ್ಲೆಯ ಖಾಸಗಿ ಪ್ರೌಢ ಶಾಲೆಗಳ ಪ್ರಾಚಾರ್ಯರ ವಿದ್ವತ್ ಸಭೆಯಲ್ಲಿ ಶಿಕ್ಷಣ ಕ್ಷೇತ್ರದ ವಸ್ತು ಸ್ಥಿತಿ ಮತ್ತು ಪ್ರಗತಿಯ ಕುರಿತು ಮಹತ್ವದ ಸಮಾಲೋಚನೆ ನಡೆಯಿತು. ಖಾಸಗಿ ಪ್ರೌಢಶಾಲೆಗಳ 200ಕ್ಕೂ ಹೆಚಚು ಪ್ರಾಚಾರ್ಯರು, ಎಜ್ಯೂಕೇಶನ್ ಇಂಡಿಯಾ ಸಂಘಟನೆಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮುಖ್ಯ ಅತಿಥಿಗಳಾಗಿದ್ದ ಕರ್ನಲ್ ಪದ್ಮಿನಿ ಶ್ರೀನಿವಾಸ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಕೋವಿಡ್ ನಂತರದ ಶಿಕ್ಷಣದ ಸ್ಥಿತಿಗತಿ ಇವೆರಡೂ ಪ್ರಸ್ತುತ ಪರಿಸ್ಥಿತಿಯಲ್ಲಿ ಮಹತ್ವ ಪಡೆದಿವೆ. 1986ರಲ್ಲಿ ಅಂಗೀಕರಿಸಿದ ಶಿಕ್ಷಣ ನೀತಿಯನ್ನೇ ಇದುವರೆಗೂ ಮುಂದುವರಿಸಲಾಗಿತ್ತು. ಈಗ ಜಗತ್ತು ಬದಲಾವಣೆಗೆ ತೆರೆದುಕೊಂಡಂತೆ ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆ ಆಗಬೇಕೆಂಬ ಮಹೋದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹಲವು ಭರವಸೆಗಳನ್ನು ಬಿತ್ತಿದೆ. ಹೊಸ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ.

ಇನ್ನು ಕೋವಿಡ್ ನಂತರ ಶಿಕ್ಷಣ ಕ್ಷೇತ್ರ ಬಹಳಷ್ಟು ಬದಲಾಗಿದೆ. ತಂತ್ರಜ್ಞಾನ ಆಧರಿತ ಪಾಠಗಳಿಗೆ ಶಿಕ್ಷಕರು, ವಿದ್ಯಾರ್ಥಿಗಳು ಒಗ್ಗಿಕೊಂಡಿದ್ದಾರೆ. ಮಕ್ಕಳನ್ನು ಸ್ಕ್ರೀನ್ ಮುಂದೆ ಕೂಡಿಸುವುದು ಒಂದು ಭಗೀರಥ ಪ್ರಯತ್ನವೇ ಸರಿ. ಅದು ಶಿಕ್ಷಕರಿಗೆ ಸವಾಲೂ ಹೌದು. ಇಂಥ ಬದಲಾವಣೆಗಳನ್ನೆಲ್ಲ ಸ್ವೀಕರಿಸಿ ಶಿಕ್ಷಣ ಕ್ಷೇತ್ರ ಹೊಸ ಹಾದಿಗೆ ಹೊರಳಬೇಕಿದೆ. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಿದೆ. ಜಗತ್ತಿನ ಬದಲಾವಣೆಗಳಿಗೆ ಸ್ಪಂದಿಸಿ ನಮ್ಮ ಪ್ರಗತಿಯನ್ನು ಕಂಡುಕೊಳ್ಳಬೇಕು. ಕಾಲದೊಂದಿಗೆ ಕಾಲು ಹಾಕುವ ಮನೋಸ್ಥಿತಿಗೆ ನಾವು ತೆರೆದುಕೊಳ್ಳಬೇಕಿದೆ ಎಂದರು.

ಈ ವೇಳೆ ಪ್ರೊ. ಬಸವರಾಜ ಕೊಣ್ಣೂರ, ವಿನೋದ ದೊಡ್ಡಣ್ಣವರ, ಎಜ್ಯೂಕೇಶನ್ ಇಂಡಿಯಾ ಸಂಸ್ಥೆಯ ಸಿಇಒ ಡಾ.ಮನಜೀತ್ ಜೈನ್, ಏಜ್ಯುಬಡ್ಡಿ ಸಂಸ್ಥೆಯ ಸಂತೋಷ ಖಟವಟೆ, ನಿಶಾಂತ ಶರ್ಮಾ, ಸೌರಭ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!