ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಿದ್ದಕ್ಕೆ ನಾಡದ್ರೋಹಿ ಎಂಇಎಸ್ ಮುಖಂಡರು ಅಂಡ ಸುಟ್ಟ ಬೆಂಕಿನಂತೆ ವರ್ತಿಸುತ್ತಿದ್ದಾರೆ. ಇದೀಗ ಮತ್ತೆ ಖ್ಯಾತೆ ತೆಗೆದು ಕನ್ನಡ ಧ್ವಜ ಹಾರಿಸಿ ಮರಾಠಿಗರ ಭಾವನೆಗಳಿಗೆ ಕನ್ನಡ ಹೋರಾಟಗಾರರು ಧಕ್ಕೆ ತಂದಿದ್ದಾರೆ. ಇದಕ್ಕೆ ನಾವು ತಕ್ಕ ಉತ್ತರ ನೀಡಬೇಕಾಗಿದೆ ಎಂದು ನಾಲಿಗೆ ಹರಿ ಬಿಟ್ಟಿದ್ದಾರೆ.
ಹೌದು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಂತಹ ಕನ್ನಡ ನೆಲದಲ್ಲಿ ಕನ್ನಡ ಧ್ವಜ ಹಾರಿಸಿದ್ದಕ್ಕೆ ನಾಡದ್ರೋಹಿ ಎಂಇಎಸ್ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಪದೇ ಪದೇ ಸಭೆ ಮಾಡಿ ತಮ್ಮ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ.ಶನಿವಾರ ಬೆಳಗಾವಿಯ ಮರಾಠಾ ಮಂದಿರದಲ್ಲಿ ತಾಲೂಕಾ ಎಂಇಎಸ್ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಮನೋಹರ್ ಕಿಣೇಕರ್ ಮುಂಬರುವ ಪಾಲಿಕೆ ಚುನಾವಣೆ ದೃಷ್ಟಿಯಿಂದ ಕನ್ನಡಿಗರನ್ನು ಒಗ್ಗಟ್ಟು ಮಾಡಲು ಈ ರೀತಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಲಾಗಿದೆ. ಕನ್ನಡ ಧ್ವಜವನ್ನು ಪ್ರಾದೇಶಿಕ ಕಚೇರಿ ಸೇರಿದಂತೆ ಇನ್ನಿತರ ಕಡೆ ಕಚೇರಿ ಒಳಗೆ ಹಾರಿಸಿಲ್ಲ. ಇದು ಅಧಿಕೃತ ಅಲ್ಲ. ಅಧಿಕೃತ ಆಗಿದ್ದರೆ ಕಚೇರಿ ಆವರಣದ ಒಳಗೆ ಕನ್ನಡ ಧ್ವಜ ಹಾರಿಸಲಿ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಸರಸ್ವತಿ ಪಾಟೀಲ್, ಎಲ್.ಐ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಒಟ್ಟಾರೆ ಪದೇ ಪದೇ ಕಾಲು ಕೆರೆದು ಜಗಳಕ್ಕೆ ನಿಂತಿರುವ ನಾಡದ್ರೋಹಿ ಎಂಇಎಸ್ ಮುಖಂಡರಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಕನ್ನಡಪರ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.