ಬೆಳಗಾವಿ ಎಸಿ ಅಶೋಕ್ ತೇಲಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಎಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರು ತಮ್ಮ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
ಎಸಿಗೆ ಧಿಕ್ಕಾರ, ಭ್ರಷ್ಟ ಅಧಿಕಾರಿಗೆ ಧಿಕ್ಕಾರದ ಘೋಷಣೆಗಳು, ಎಸಿ ಅಶೋಕ ತೇಲಿ ಅವರ ವಿರುದ್ಧ ಭ್ರಷ್ಟಾಚಾರಾದ ಆರೋಪ ಮಾಡುತ್ತಿರುವ ವಕೀಲರು. ಹೌದು ಮಂಗಳವಾರ ಬೆಳಗಾವಿಯ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ವಕೀಲರು ತಮ್ಮ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾದರು.
ಎಸಿ ಅಶೋಕ ತೇಲಿ ಅವರು ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬೆಳಗಾವಿ ಎಸಿ ಆಫೀಸ್ ಎಂದರೆ ಇದು ಏಜೆಂಟರ್ ಆಫೀಸ್ ಆಗಿದೆ. ಇಲ್ಲಿ ಯಾವುದೇ ಜನಪ್ರತಿನಿಧಿಗಳು ಈ ಕಡೆ ತಲೆ ಹಾಕುವುದಿಲ್ಲ, ಏನೂ ಕೇಳುವುದಿಲ್ಲ ಇದರಿಂದ ಇವರು ಮಾಡಿದ್ದೇ ಆಟವಾಗಿ ಬಿಟ್ಟಿದೆ. ನಮ್ಮ ಕೇಸ್ಗಳ ಸಂಬಂಧ ಆಫೀಸ್ಗೆ ಬಂದರೆ ನಮ್ಮ ಜೊತೆ ಸೌಜನ್ಯಯುತವಾಗಿ ವರ್ತಿಸುತ್ತಿಲ್ಲ. ನೀವು ಆಗ ಬನ್ನಿ ಈಗ ಬನ್ನಿ ಎನ್ನುತ್ತಿದ್ದಾರೆ. ನೇರವಾಗಿ ಕಕ್ಷಿದಾರರ ಬಳಿ ಕಮೀಷನ್ ಪಡೆಯುತ್ತಿದ್ದಾರೆ. ವಕೀಲರನ್ನು ಬಿಟ್ಟು ಬನ್ನಿ ಎಂದು ಹೇಳುತ್ತಿದ್ದಾರೆ. ಖಾನಾಪುರದಲ್ಲಿ ಶೇ.30ರಷ್ಟು ಕಮಿಷನ್ ತಿಂದಿರುವ ಕುರಿತು ವಿಡಿಯೋಗಳು ನಮ್ಮಲ್ಲಿವೆ. ಹೀಗಾಗಿ ಎಸಿ ಅಶೋಕ್ ತೇಲಿ ಅವರನ್ನು ತಕ್ಷಣವೇ ಟ್ರಾನ್ಸಫರ್ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಇದೇ ರೀತಿ ಎಸಿ ಅವರು ಉದ್ಧಟತನದಿಂದ ವರ್ತಿಸಿದ್ರೆ ನಾವು ಕಲಾಪಗಳಿಗೆ ಹಾಜರಾಗುವುದಿಲ್ಲ ಎಂದು ಎಚ್ಚರಿಸಿದರು.
ಒಟ್ಟಾರೆ ಬೆಳಗಾವಿ ಉಪವಿಭಾಗಾಧಿಕಾರಿಗಳ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು. ವಕೀಲರು ಎಸಿ ಅವರ ವಿರುದ್ಧ ಅಕ್ಷರಶಃ ಕೆಂಡಕಾರುತ್ತಿದ್ದಾರೆ. ಈ ಸಂಬಂಧ ಎಸಿ ಅಶೋಕ್ ತೇಲಿ ಅವರೇ ಸ್ವತಃ ಸ್ಪಷ್ಟನೆ ನೀಡುವ ಅವಶ್ಯಕತೆಯಿದೆ.