ದಾವಣಗೇರಿ ಜಿಲ್ಲೆ ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರುವರಿ 8 ಮತ್ತು 9ರಂದು ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ಅಷ್ಟರೊಳಗೆ ರಾಜ್ಯ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಾಲ್ಮೀಕಿ ಸಮುದಾಯದ ಬಹುದಿನಗಳ ಶೇ.7.5ರಷ್ಟು ಮೀಸಲಾತಿ ಬೇಡಿಕೆಯನ್ನು ಈಡೇರಿಸಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಆಗ್ರಹಿಸಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರುವರಿ 8 ಮತ್ತು 9ರಂದು ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾತ್ರೆಯ ಸಂದೇಶ ಬಿತ್ತರಿಸಲು ಗುರುವಾರ ಬೆಳಗಾವಿಗೆ ಆಗಮಿಸಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘ ಹಾಗೂ ವಾಲ್ಮೀಕಿ ಸಮಾಜದ ವತಿಯಿಂದ ಗೌರವಾಧ್ಯಕ್ಷ ಎಂ.ಐ.ಕೋಮನ್ನವರ, ಆರ್.ಎಸ್.ಪಂಗನ್ನವರ ಮತ್ತಿತರ ಧುರೀಣರು ಸ್ವಾಗತಿಸಿದರು. ನಂತರ ಸ್ವಾಮೀಜಿ, ಕಣಬರಗಿ ರಸ್ತೆಯ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಜಾತ್ರೆಗೆ ಸಂಬಂಧಿಸಿ ಪ್ರಚಾರ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ 5 ಜನರನ್ನೊಳಗೊಂಡ ವಾಲ್ಮೀಕಿ ಸಮಿತಿ ರಚಿಸಿ ಜವಾಬ್ದಾರಿ ವಹಿಸಿದರು. ಜೊತೆಗೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಗಳಲ್ಲಿ ಆಯ್ಕೆಯಾದ ವಾಲ್ಮೀಕಿ ಸಮುದಾಯದ ಸದಸ್ಯರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಈ ವೇಳೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಮಾತನಾಡಿ, ಫೆಬ್ರವರಿ 8 ಮತ್ತು 9ರಂದು ವಾಲ್ಮೀಕಿ ಗುರುಪೀಠದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ನಾಯಕ ಸಮುದಾಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.7.5ರಷ್ಟು ಮೀಸಲಾತಿಗೆ ಒತ್ತಾಯಿಸುತ್ತಲೇ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತ್ರೆಯ ಒಳಗಾಗಿ ವಾಲ್ಮೀಕಿ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು. ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿ, ಜಾತ್ರೆಗೆ ಸಂಬಂಧಿಸಿ 5 ಜನರ ಜಿಲ್ಲಾ ಸಮಿತಿಗೆ ಜಾತ್ರೆ ಕಾರ್ಯಕ್ರಮದ ಪ್ರಚಾರದ ಹೊಣೆ ವಹಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ವಾಲ್ಮೀಕಿ ಸಮುದಾಯದ ರಾಜ್ಯ ಸಂಚಾಲಕ ನಾಮದೇವ ಮಾಳಗಿ, ಎಲ್.ಎಸ್.ಪಂಗನ್ನವರ, ಎಸ್.ಎಸ್.ನಿಂಗಾನಿ ಮತ್ತಿತರರು ಇದ್ದರು.