ಆರ್ಥಿಕವಾಗಿ ಹಿಂದುಳಿದಿರುವ ಲಿಂಗಾಯತ ಸಮಾಜವನ್ನು ಇತರೆ ಹಿಂದುಳಿದ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಶೀಘ್ರ ನಿರ್ಣಯ ಕೈಗೊಳ್ಳಬೇಕು, ರಾಜ್ಯದಲ್ಲಿ ಲಿಂಗಾಯತ ಸಮಾಜಕ್ಕೆ ಶೇ.16ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲು ಲಿಂಗಾಯತ ಶಾಸಕರು, ಸಂಸದರು, ಇತರೆ ಜನಪ್ರತಿನಿಧಿಗಳು ಮತ್ತು ಗಣ್ಯರನ್ನೊಳಗೊಂಡ ನಿಯೋಗ ಜನವರಿ 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದೆ ಎಂದು ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿ ಹೋರಾಟ ವೇದಿಕೆಯ ಮುಖಂಡ ಬಸನಗೌಡ ಚಿಕ್ಕನಗೌಡರ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿ ಹೋರಾಟ ವೇದಿಕೆಯ ಮುಖಂಡ ಬಸನಗೌಡ ಚಿಕ್ಕನಗೌಡರ ಮಂಗಳವಾರ ಮಾತನಾಡಿ, ಲಿಂಗಾಯತ ಸಮಾಜವನ್ನು ಇತರೆ ಹಿಂದುಳಿದ ಪಟ್ಟಿಯಲ್ಲಿ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈ ಹಿಂದೆಯೂ ಮನವಿ ಸಲ್ಲಿಸಿದ್ದೇವು.
ಆದರೆ ಆ ಪ್ರಕ್ರಿಯೆ ಶುರುವಾಗುತ್ತಿದ್ದಂತೆಯೇ ಅದನ್ನು ತಡೆಹಿಡಿಯಲು ಹಲವರು ಪ್ರಯತ್ನಿಸಿದರು. ಕೇಂದ್ರ ಗೃಹ ಸಚಿವ, ಬಿಜೆಪಿ ವರಿಷ್ಠ ಅಮಿತ್ ಶಾ ಸಹ ಹಿಂದೇಟು ಹಾಕಿದರು. ಬಹುಶಃ ತಪ್ಪು ತಿಳಿವಳಿಕೆಯಿಂದ ಲಿಂಗಾಯತ ಸಮಾಜಕ್ಕೆ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ದೊರಕಿಲ್ಲ. ಅವರ ತಪ್ಪು ತಿಳಿವಳಿಕೆಯನ್ನು ದೂರ ಮಾಡಿ, ಸಮಾಜದ ಬಡವರಿಗೆ ನ್ಯಾಯ ದೊರಕಿಸಿಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಿದೆ. ಅದಕ್ಕಾಗಿ ಲಿಂಗಾಯತ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಗಣ್ಯರನ್ನೊಳಗೊಂಡ ನಿಯೋಗವೊಂದು ಜನವರಿ 17ರಂದು ಬೆಳಗಾವಿಗೆ ಭೇಟಿ ನೀಡಲಿರುವ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದೆ.
ಲಿಂಗಾಯತ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಮನವಿ ಸಲ್ಲಿಸಲಿದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ಅಲ್ಲಿಯ ಮರಾಠಾ ಜನಾಂಗಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದೆ. ಅಲ್ಲಿ ಸರ್ಕಾರದ ಮೀಸಲಾತಿ ಶೇ.68ಕ್ಕೆ ಏರಿಕೆಯಾಗಿದೆ. ಅದರಂತೆ ಕರ್ನಾಟಕದಲ್ಲೂ ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಲಿಂಗಾಯತ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.