ಬೆಳಗಾವಿ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕ ಅನಿಲ ಬೆನಕೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಉತ್ಸವವನ್ನು ಸವಾಯಿ ಗಂಧರ್ವ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಗಣ್ಯರು, ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶಾಸಕ ಅನಿಲ ಬೆನಕೆ ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಶಾಸಕ ಅನಿಲ ಬೆನಕೆ ಮಾತನಾಡಿ, 12ನೇ ಶತಮಾನದ ಸಂತ ಶಿವಯೋಗಿ ಸಿದ್ದರಾಮೇಶ್ವರರು ಅನುಭವ ಮಂಟಪದ ಸಕ್ರಿಯ ಸದಸ್ಯರಾಗಿ ಸಮಾಜದಲ್ಲಿ ಸುಧಾರಣೆ ತರಲು ಬಸವಣ್ಣನವರ ಜೊತೆಗೆ ಕಾರ್ಯ ಮಾಡಿದರು. ಸಾಮಾಜಿಕ ಕ್ರಾಂತಿ ಕಹಳೆ ಊದಿದ 12ನೇ ಶತಮಾನ ಶಿವಯೋಗಿ ಸಿದ್ದರಾಮೇಶ್ವರರಂತಹ ಮಹಾಪುರುಷ ಇದ್ದರು ಎಂಬುದು ನಮ್ಮ ಹೆಮ್ಮೆ. ಅವರು ಉಳಿಸಿಹೋಗಿರುವ ವಚನಗಳು ಸಮಾಜದ ಪ್ರಗತಿಗೆ ದಾರಿದೀಪವಾಗಿವೆ ಎಂದರು.
ಮುಖ್ಯ ಅತಿಥಿಯಾಗಿ ವಿಶೇಷ ಉಪನ್ಯಾಸ ನೀಡಿದ ಪ್ರಾಧ್ಯಾಪಕಿ ಮೇತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, 12ನೇ ಶತಮಾನ ವಚನ ಚಳವಳಿಯ ಸುವರ್ಣಯುಗ. ಆ ಯುಗದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಅನುಭಾವ ಚಿಂತನೆಗಳು ಸರ್ವಹಿತ ಚಿಂತನೆಯಲ್ಲಿ ಮಾರ್ಗದಲ್ಲಿ ಸಮಗ್ರ ಸಮಾಜದ ವಿಕಾಸಕ್ಕೆ ಕಾರಣವಾದದ್ದು ನೆನಪಿನಲ್ಲಿ ಇಡಬೇಕಾದಂಥದು. ಶಿವಯೋಗಿ ಸಿದ್ದರಾಮೇಶ್ವರರು ತಮ್ಮ ಸಾಮಾಜಿಕ ಸುಧಾರಣೆಯ ಚಿಂತನೆಗಳ ಮೂಲಕ ಮನುಕುಲಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದು ಬಣ್ಣಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಮಾಜದ ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.