ಸಿಎಂ ರಾಜಕೀಯ ಕಾರ್ಯದರ್ಶಿ ಎ.ಪಿ.ರೇಣುಕಾಚಾರ್ಯಗೆ ಮಂತ್ರಿ ಸ್ಥಾನ ಸಿಗದೇ ಹೋದ್ರೆ ರೆಬೆಲ್ ಆಗುತ್ತಾರಾ ಎಂಬ ಅನುಮಾನ ಮೂಡುತ್ತಿದೆ. ಮುಖ್ಯಮಂತ್ರಿಗಳಿಂದ ನನಗೆ ಈವರೆಗೂ ಯಾವುದೇ ಕರೆ ಬಂದಿಲ್ಲ. ಸಂಜೆವರೆಗೂ ಕಾಯುತ್ತೇನೆ. ಒಂದು ವೇಳೆ ದಾವಣಗೆರೆ ಜಿಲ್ಲೆ ಕಡೆಗಣಿಸಿದ್ರೆ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಕಾಯ್ದು ನೋಡಿ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು ಬುಧವಾರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ. ಇನ್ನು ಈ ಬಾರಿ ನನಗೆ ಸಚಿವ ಸ್ಥಾನ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದ ರೇಣುಕಾಚಾರ್ಯಗೆ ಈವರೆಗೂ ಸಿಎಂ ಯಡಿಯೂರಪ್ಪನವರು ಕರೆ ಮಾಡಿಲ್ಲ. ಇದರಿಂದ ಆಕ್ರೋಶಭರಿತವಾಗಿ ಮಾತನಾಡಿರುವ ರೇಣುಕಾಚಾರ್ಯ ಭೌಗೋಳಿಕವಾಗಿ, ಸಾಮಾಜಿಕವಾಗಿ ಎಲ್ಲವನ್ನೂ ವಿಚಾರ ಮಾಡಿ ಸಂಪುಟ ವಿಸ್ತರಣೆ ಮಾಡಬೇಕು. ಕೇವಲ ಬೆಂಗಳೂರು, ಬೆಳಗಾವಿಗೆ ಮಾತ್ರ ಸಂಪುಟ ಸಿಮೀತ ಆಗಬಾರದು. ಬೇರೆ ಜಿಲ್ಲೆಗಳು ರಾಜ್ಯದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು. ಇನ್ನು ಅಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇಲ್ಲಿ ಮಧ್ಯಕರ್ನಾಟಕಕ್ಕೆ ಅನ್ಯಾಯವಾಗಿದೆ ಹೀಗಾಗಿ ಸೂಕ್ತ ಕಾಲದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಾನು ರೆಬೆಲ್ ಅಲ್ಲ ಆದ್ರೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಕಾಯ್ದು ನೋಡಿ ಎಂದು ಹೇಳಿದ್ದಾರೆ.
ಒಟ್ಟಾರೆ ಸಚಿವ ಸ್ಥಾನ ಸಿಗದೇ ಹೋದ್ರೆ ಎಂಪಿ ರೇಣುಕಾಚಾರ್ಯ ಮುಂದಿನ ನಡೆ ಏನು ಎಂಬುದು ಸಧ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು. ಇರುವ ಏಳು ಮಂತ್ರಿ ಸ್ಥಾನಗಳಲ್ಲಿ ಯಾರಿಗೆ ಸಂಕ್ರಾತಿ ಸಿಹಿ ಸಿಗುತ್ತೆ, ಯಾರಿಗೆ ಸಂಕ್ರಾಂತಿ ಕಹಿ ಸಿಗುತ್ತೆ ಎಂಬುದು ನಾಳೆ ಬಹಿರಂಗ ಆಗಲಿದೆ.