ಬೆಳಗಾವಿ ತಾಲೂಕಿನ ಕಣಬರಗಿ ಹೊರವಲಯದ ಹೊಲಗಳಲ್ಲಿ ರಾತ್ರಿ ವೇಳೆ ದನಕರುಗಳನ್ನು ಮೇಯಲು ಬಿಟ್ಟು ರೈತರಿಗೆ ಅಪಾರ ಹಾನಿ ಉಂಟು ಮಾಡಲಾಗುತ್ತಿದೆ. ದನಕರುಗಳನ್ನು ಮೇಯಲು ಬಿಡುವವರ ಮೇಲೆ ಕಠಿಣ ಕ್ರಮ ಕೈಗೊಂಡು ಬೆಳೆ ರಕ್ಷಿಸಬೇಕು, ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿ ನೂರಾರು ರೈತರು ಕಣಬರಗಿ ಕ್ರಾಸ್ನಲ್ಲಿ ಪ್ರತಿಭಟನೆ ನಡೆಸಿದರು.
: ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಕಣಬರಗಿ ಹೊರವಲಯದ ಹೊಲಗಳಲ್ಲಿ ದನಕರುಗಳನ್ನು ಮೇಯಲು ಬಿಡುವವರ ಮೇಲೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಕೂಡಲೇ ಬೆಳೆ ಹಾನಿ ತಪ್ಪಿಸಿ ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿ ನೂರಾರು ರೈತರು ಕಣಬರಗಿ ಕ್ರಾಸ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಮಹಾನಗರ ಪಾಲಿಕೆ, ಪೊಲೀಸರು ಮತ್ತು ಜಿಲ್ಲಾಡಳಿತದ ನಿಷ್ಕ್ರೀಯತೆ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ರೈತ ಮುಖಂಡ ಶಿವಾಜಿ ಸುಂಠಕರ ಮಾತನಾಡಿ, ಕಣಬರಗಿ ರೈತರು ಸಾಕಷ್ಟು ಬಾರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿ ತಮ್ಮ ಹೊಲಗಳಲ್ಲಿರುವ ಬೆಳೆ ದನಕರುಗಳಿಂದ ನಾಶವಾಗುತ್ತಿದ್ದು, ಉಳಿಸಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದರು. ಆದರೆ ಇದುವರೆಗೂ ಪಾಲಿಕೆ ಮತ್ತು ಪೊಲೀಸರಿಗೆ ತಪ್ಪಿತಸ್ಥರನ್ನು ಹಿಡಿಯಲು ಸಾಧ್ಯವಾಗಿಲ್ಲ. ಕೂಡಲೇ ಅಧಿಕಾರಿಗಳು ಈ ಕುರಿತು ಸರ್ವೇ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ರೈತರ ಬೆಳೆಯನ್ನು ಉಳಿಸಬೇಕು ಎಂದು ಆಗ್ರಹಿಸಿದರು. ಪಾಲಿಕೆ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಮಾತನಾಡಿ, ಬಿಡಾಡಿ ದನಗಳು, ಹಂದಿ, ನಾಯಿಗಳ ಕಾಟವನ್ನು ತಪ್ಪಿಸುವುದು ಮಹಾನಗರ ಪಾಲಿಕೆ ಜವಾಬ್ದಾರಿಯಾಗಿದೆ ಎಂಬುದನ್ನು ಒಪ್ಪುತ್ತೇನೆ. ಬಿಡಾಡಿ ದನಗಳನ್ನು ಸಾಗಿಸಿ ಕ್ರಮ ಕೈಗೊಳ್ಳುತ್ತೇವೆ. ಇಂದಿನಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ. ತಂಡವನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಲಾಗುವುದು. ತಪ್ಪಿತಸ್ಥರು ಎಷ್ಟೇ ದೊಡ್ಡವರಿದ್ದರೂ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಮಾಳಮಾರುತಿ ಸಿಪಿಐ ಸುನೀಲ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು.
ರೈತ ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ಸುಧೀರ ಗಡ್ಡೆ. ಸಂಜಯ ಇನಾಮದಾರ್. ರಾಘವೇಂದ್ರಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.