ಕೇಂದ್ರ ಸರ್ಕಾರ ಈಗ ಒಟ್ಟು 1.1 ಕೋಟಿ ಡೋಸ್ ಲಸಿಕೆಯನ್ನು ಖರೀದಿ ಮಾಡಿದೆ. ಇಡೀ ಜಗತ್ತಿನಲ್ಲಿ ಇಷ್ಟು ಕಡಿಮೆ ದರದಲ್ಲಿ ಕೊರೊನಾ ಲಸಿಕೆ ನಿಗದಿ ಮಾಡಿರುವ ಸರ್ಕಾರ ಬೇರೆ ಯಾವುದೂ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಮ್ಮ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಪುಣೆಯ ಎಸ್‍ಐಐ ಕಂಪನಿಯಿಂದ ಲಸಿಕೆ ಖರೀದಿ ಮಾಡಲಾಗಿದೆ. 1 ಡೋಸ್‍ಗೆ 210 ರೂಪಾಯಿಯಂತೆ ದರ ನಿಗದಿ ಪಡಿಸಲಾಗಿದೆ. ಇದಕ್ಕೆ 230 ಕೋಟಿ ರೂಪಾಯಿ ವೆಚ್ಛವನ್ನು ಕೇಂದ್ರ ಸರ್ಕಾರ ಭರಿಸಿದೆ. 1 ವಯಲ್‍ನಲ್ಲಿ 5 ಎಂ.ಎಲ್ ಇರುತ್ತದೆ. ಇದರಲ್ಲಿ 0.5 ಎಂ.ಎಲ್ ಒಬ್ಬರಿಗೆ ಕೊಡಬೇಕಾಗುತ್ತದೆ. ಹೀಗಾಗಿ 1 ವಯಲ್‍ನಿಂದ 10 ಜನರಿಗೆ ಲಸಿಕೆ ನೀಡಬಹುದಾಗಿದೆ. ಒಮ್ಮೆ ಡೋಸ್ ನೀಡಿದ ಬಳಿಕ 28 ದಿನಗಳ ಬಳಿಕ ಮತ್ತೆ ಡೋಸ್ ನೀಡಲಾಗುವುದು. ಇನ್ನು ಈ ಲಸಿಕೆಯಿಂದ ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಬರುತ್ತದೆ. ಹೀಗಾಗಿ ಸಂಪೂರ್ಣ ಸುರಕ್ಷಿತವಾದ ಲಸಿಕೆಯಾಗಿದೆ. ಆದ್ದರಿಂದ ಈ ಲಸಿಕೆ ಬಗ್ಗೆ ಯಾವುದೇ ಆತಂಕ ಪಡುವ ಅವಶ್ಯಕೆಯಿಲ್ಲ ಎಂದು ಸ್ಪಷ್ಟಪಡಿಸಿದರು.
: ಮುಂದುವರಿದು ಮಾತನಾಡಿದ ಡಾ.ಕೆ.ಸುಧಾಕರ್ ಈ ಲಸಿಕೆ ಮಾರಾಟಕ್ಕೆ ಅಲ್ಲ ಎಂದು ವಯಲ್ ಮೇಲೆ ಸ್ಪಷ್ಟವಾಗಿ ಬರೆಯಲಾಗಿದೆ. ಆರಂಭದಲ್ಲಿ ಆರೋಗ್ಯ ಇಲಾಖೆ ಹಾಗೂ ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್‍ಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾಸ ಲಸಿಕೆ ನೀಡಲಾಗುತ್ತದೆ. ಒಂದು ಸಣ್ಣ ಅಡ್ಡಪರಿಣಾಮವಾದ್ರೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಮೊದಲ ಕಂತಿನಲ್ಲಿ 7 ಲಕ್ಷ 95 ಸಾವಿರ ಕೋವಿಶೀಲ್ಡ್ ರಾಜ್ಯಕ್ಕೆ ಬರುತ್ತಿದೆ. ಇನ್ನುಳಿದ ಕೋವಿಶೀಲ್ಡ್ 2ನೇ ಹಂತದಲ್ಲಿ ಬರಲಿದೆ. ಈಗ ಬಂದಿರುವ ಆನಂದರಾವ್ ಸರ್ಕಲ್‍ನಲ್ಲಿರುವ ರಾಜ್ಯ ಸಂಗ್ರಹಣಾಗಾರದಲ್ಲಿ ಶೇಖರಿಸಲಾಗಿದೆ ಎಂದರು.
ಒಟ್ಟಾರೆ ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಸಿಗಲಿದ್ದು. ನಂತರದ ದಿನಗಳಲ್ಲಿ ಜನಸಾಮಾನ್ಯರಿಗೂ ಲಸಿಕೆ ನೀಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದಾರೆ.