Belagavi

ಬೆಳಗಾವಿಯಲ್ಲಿ ನ.28ರಿಂದ ರಾಷ್ಟ್ರೀಯ ಪ್ರಸೂತಿ ವೈದ್ಯಕೀಯ ಸಮ್ಮೇಳನ

Share

ಭಾರತೀಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘಗಳ ಒಕ್ಕೂಟ, ಬೆಳಗಾವಿ ಪ್ರಸೂತು ಸ್ತ್ರೀರೋಗ ತಜ್ಞರ ಸಂಘ ಹಾಗೂ ಕೆಎಎಚ್ಇಆರ್ ನ ಜಿಎನ್ಎಂಸಿ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಸಹಯೋಗದಲ್ಲಿ ರಾಷ್ಟ್ರೀಯ ವೈದ್ಯಕೀಯ ಸಮ್ಮೇಳನವನ್ನು ನ.28 ರಿಂದ 29ರಂದು ಜೆಎನ್ಎಂಸಿ ಕೆಎಲ್ಇ ಶತಮಾನೋತ್ಸವ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಕೆಎಲ್ಇ ವಿಸಿ ಡಾ. ಸಂದೀಪ್ ಶ್ರೀವಾಸ್ತವ್ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಸಮ್ಮೇಳನದಲ್ಲಿ ಅಮೆರಿಕ, ಇಂಗ್ಲೆಂಡ್, ಇಸ್ರೇಲ್ ಹಾಗೂ ಕೊಲಂಬಿಯಾ ದೇಶಗಳ ವೈದ್ಯಕೀಯ ವಿಜ್ಞಾನಿಗಳು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ. ಅಂತರರಾಷ್ಟ್ರೀಯ ತಜ್ಞರೊಂದಿಗೆ ಭಾರತದ ವಿವಿಧ ರಾಜ್ಯಗಳ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಪಾಲ್ಗೊಂಡು ತಾಯಿ ಹಾಗೂ ನವಜಾತ ಶಿಶುಗಳ ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಸಂಶೋಧನಾ ಫಲಿತಾಂಶಗಳು ಮತ್ತು ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

ವಿಶೇಷವಾಗಿ ಗರ್ಭಾವಸ್ಥೆ ಮತ್ತು ಹೆರಿಗೆಯ ನಂತರ ಕಾಣಿಸಿಕೊಳ್ಳುವ ರಕ್ತಹೀನತೆ, ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಹಾಗೂ ಪ್ರೀ-ಎಕ್ಲಾಂಪ್ಸಿಯಾ, ಹೆರಿಗೆಯ ನಂತರದ ಅಧಿಕ ರಕ್ತಸ್ರಾವ, ಅವಧಿಪೂರ್ವ ಹೆರಿಗೆ, ಗರ್ಭಸ್ಥ ಶಿಶುವಿನ ಬೆಳವಣಿಗೆಯ ಕುಂಠಿತತೆ, ಗರ್ಭಾವಸ್ಥೆಯ ಮಧುಮೇಹ ಹಾಗೂ ತಾಯಂದಿರಲ್ಲಿ ಕಾಣಿಸಿಕೊಳ್ಳುವ ಸೆಪ್ಸಿಸ್ ಸೇರಿದಂತೆ ಏಳು ಪ್ರಮುಖ ಆರೋಗ್ಯ ಸಮಸ್ಯೆಗಳ ಕುರಿತು ವೈಜ್ಞಾನಿಕ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.

ಈ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು, ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ತಾಯಿ ಮತ್ತು ಮಗುವಿನ ಜೀವ ರಕ್ಷಣೆಗಾಗಿ ಅನುಸರಿಸಬೇಕಾದ ಆಧುನಿಕ ವೈದ್ಯಕೀಯ ಕ್ರಮಗಳ ಕುರಿತು ತಜ್ಞರು ವಿಚಾರ ವಿನಿಮಯ ನಡೆಸಲಿದ್ದಾರೆ. ವೈದ್ಯಕೀಯ ಸಂಶೋಧನೆಗಳಿಂದ ದೊರೆಯುವ ಫಲಿತಾಂಶಗಳನ್ನು ನೇರವಾಗಿ ಚಿಕಿತ್ಸಾ ಪದ್ಧತಿಗಳಲ್ಲಿ ಅಳವಡಿಸಿಕೊಳ್ಳುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

FOGSI ರಾಷ್ಟ್ರೀಯ ಅಧ್ಯಕ್ಷ ಡಾ. ಭಾಸ್ಕರ್ ಪಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕೆಎಎಚ್‌ಇಆರ್‌ನ ಗೌರವಾನ್ವಿತ ಕುಲಾಧಿಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ರಾಜಸ್ಥಾನ ಸರ್ಕಾರದ ಆರೋಗ್ಯ ಇಲಾಖೆಯ ಹೆಚ್ಚುವರಿ ಅಭಿಯಾನ ನಿರ್ದೇಶಕಿ ಡಾ. ಟಿ. ಶುಭಮಂಗಳ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಯಂದಿರ ಆರೋಗ್ಯ ವಿಭಾಗದ ಉಪನಿರ್ದೇಶಕಿ ಡಾ. ಇಂದಿರಾ ಕಬಾಡೆ, ಕೆಎಎಚ್‌ಇಆರ್ ಕುಲಪತಿ ಡಾ. ಸಂದೀಪ್ ಶ್ರೀವಾಸ್ತವ, ಕುಲಸಚಿವ ಡಾ. ವಿಶ್ವನಾಥ ಪಟ್ಟಣಶೆಟ್ಟಿ ಹಾಗೂ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜೇಶ್ ಪವಾರ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಡಾ.ವಿ.ಎಂ.ಪಟ್ಟಣಶೆಟ್ಟಿ, ಎಂ.ಸಿ.ಮೆಟಗುಡ್ಡ, ಡಾ. ರಾಜಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!