ಬೆಳಗಾವಿಯ ಖಂಜರ್ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಟಕಾ ದಂಧೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಾರ್ಕೆಟ್ ಠಾಣೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಹಣ ಹಚ್ಚಿಕೊಂಡು ಮಟಕಾ ಆಟವಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಆರೋಪಿಗಳಿಂದ ನಗದು ಹಾಗೂ ಮಟಕಾ ಚೀಟಿಗಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ದಿನಾಂಕ 19/11/2026 ರಂದು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ಮಣಿಕಂಠ ಪೂಜಾರಿ ಹಾಗೂ ಸಿಬ್ಬಂದಿ ಬೆಳಗಾವಿಯ ಖಂಜರ್ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಆಟದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ದರ್ಬಾರ್ ಗಲ್ಲಿಯ ನಿವಾಸಿ ಸಾಕೀಬ್ ಮೊಹಮ್ಮದಲಿ ಅಡ್ಡೆವಾಲೆ (30) ಮತ್ತು ಬಂಜರ ಗಲ್ಲಿಯ ನಿವಾಸಿ ಫಹೀಮ ಜಲಾನಿ ಕೊತ್ವಾಲ್ ಎಂಬುವರು ತಮ್ಮ ಸ್ವಂತ ಫಾಯ್ದೆಗೋಸ್ಕರ ಅಂಕಿ ಸಂಖ್ಯೆಗಳ ಮೇಲೆ ಹಣ ಹಚ್ಚಿಕೊಂಡು ಅಕ್ರಮವಾಗಿ ಮಟಕಾ ಆಟ ಆಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಆರೋಪಿಗಳಿಂದ 1,210 ರೂಪಾಯಿ ನಗದು ಹಾಗೂ ಓಸಿ ಚೀಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 250/2026, ಕಲಂ 78(3) ಕೆ.ಪಿ. ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ದಾಳಿ ನಡೆಸಿದ ಪಿಎಸ್ಐ ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.
