Belagavi

ಬೆಳಗಾವಿಯಲ್ಲಿ ಜಲಸಂಕಟ ತಡೆಯಲು ಡಿಸಿ ಮಾಸ್ಟರ್ ಪ್ಲಾನ್

Share

ಬೆಳಗಾವಿ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಅಭಾವ ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ನಗರ ಪ್ರದೇಶಗಳಲ್ಲಿ ನೀರು ಬಳಕೆ ಕಡಿತ ಹಾಗೂ ನದಿ ತೀರಗಳಲ್ಲಿ ವಿದ್ಯುತ್ ಕಡಿತ ವಿಸ್ತರಣೆ ಸೇರಿದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಳಿತ, ಪ್ರಮುಖ ನದಿ ಮತ್ತು ಜಲಾಶಯಗಳ ನೀರಿನ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸದ್ಯ ಹಿಪ್ಪರಗಿ ಬ್ಯಾರೇಜ್‌ನಲ್ಲಿ 2.5 ಟಿಎಂಸಿ ಹಾಗೂ ಮಲಪ್ರಭಾ ಜಲಾಶಯದಲ್ಲಿ 14 ಟಿಎಂಸಿ ನೀರು ಸಂಗ್ರಹವಿದ್ದು, ಕೃಷಿ ಚಟುವಟಿಕೆಗಳಿಗೆ ನೀರು ಸ್ಥಗಿತಗೊಳಿಸಿ ಕೇವಲ ಕುಡಿಯುವ ನೀರಿಗೆ ಮಾತ್ರ ಮೊದಲ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಅಲ್ಲದೆ, ನೀರಿನ ಅಕ್ರಮ ಬಳಕೆ ತಡೆಯಲು ನದಿ ತೀರದ ಪ್ರದೇಶಗಳಲ್ಲಿ ಜಾರಿಯಲ್ಲಿರುವ ವಾರಕ್ಕೆ ಎರಡು ದಿನಗಳ ವಿದ್ಯುತ್ ಕಡಿತವನ್ನು ಮೂರು ದಿನಗಳಿಗೆ ಹೆಚ್ಚಿಸಲು ಚಿಂತನೆ ನಡೆದಿದ್ದು, ಜೂನ್‌ವರೆಗೆ ನೀರು ಪೂರೈಸಲು ಪ್ರತ್ಯೇಕ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.

ಮಲಪ್ರಭಾ ನದಿಯಿಂದ ಧಾರವಾಡ, ಬೈಲಹೊಂಗಲ, ಸವದತ್ತಿ ಮತ್ತು ರೋಣ ಪಟ್ಟಣಗಳ ಕುಡಿಯುವ ನೀರಿನ ಯೋಜನೆಗಳಿಗೆ ನಿತ್ಯ 200 ರಿಂದ 250 ಕ್ಯೂಸೆಕ್ಸ್ ನೀರನ್ನು ಲಿಫ್ಟ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಮಿತಬಳಕೆ ಮತ್ತು ಮರುಬಳಕೆ’ ತತ್ವದಡಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಳಕೆಯನ್ನು ಶೇ. 10 ರಷ್ಟು ಕಡಿತಗೊಳಿಸಲು ಆದೇಶ ಹೊರಡಿಸಲಾಗುವುದು ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ನೀರನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಮಿತವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Tags:

error: Content is protected !!