ಬೆಳಗಾವಿ: ಕಣಬರ್ಗಿ 61ನೇ ಬೂಡಾ ಯೋಜನೆಯ ಹೆಸರಿನಲ್ಲಿ ರೈತರ ಜಮೀನುಗಳಿಗೆ ಯಾವುದೇ ಪೂರ್ವಸೂಚನೆ ನೀಡದೆ ಜೆಸಿಬಿ ಮತ್ತು ಬುಲ್ಡೋಝರ್ ನುಗ್ಗಿಸಲಾಗಿದೆ. ಸರ್ಕಾರದ ಧೋರಣೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ನಮ್ಮ ಜಮೀನುಗಳನ್ನು ಕೈಬಿಟ್ಟು ಪ್ಲಾನ್ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಕಣಬರ್ಗಿ ಪ್ರದೇಶದಲ್ಲಿ ಬೂಡಾ (BUDA) ಹಾಗೂ 61ನೇ ಯೋಜನೆಯ ಹೆಸರಿನಲ್ಲಿ ರೈತರ ಜಮೀನುಗಳಿಗೆ ಅಧಿಕಾರಿಗಳು ಯಾವುದೇ ಅನುಮತಿ ಅಥವಾ ಪೂರ್ವಸೂಚನೆ ಇಲ್ಲದೆ ಬಲವಂತವಾಗಿ ಜೆಸಿಬಿ ಹಾಗೂ ಬುಲ್ಡೋಝರ್ ನುಗ್ಗಿಸಿರುವುದನ್ನು ರೈತ ಸಂಘದ ಅಧ್ಯಕ್ಷ ಬಬನ್ ಮಾಲಾಯಿ ತೀವ್ರವಾಗಿ ಖಂಡಿಸಿದ್ದಾರೆ. ಸರ್ವೆ ನಂಬರ್ 512, 513, 514 ಹಾಗೂ 511 ಸೇರಿದಂತೆ ಪ್ರಮುಖ ಜಮೀನುಗಳಲ್ಲಿ ರೈತರ ಒಪ್ಪಿಗೆಯಿಲ್ಲದೆ ರಸ್ತೆಗಳನ್ನು ನಿರ್ಮಿಸಿ ನಷ್ಟ ಉಂಟುಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವಿರುವ ಕಾರಣ ಶಾಸಕರು ಹಾಗೂ ಸಂಬಂಧಪಟ್ಟವರಿಗೆ ಕಳೆದ 15 ದಿನಗಳಿಂದ ಮನವಿ ಮಾಡುತ್ತಿದ್ದರೂ, ಕೇವಲ “ಮಾಡುತ್ತೇವೆ, ನೋಡುತ್ತೇವೆ” ಎಂದು ಭರವಸೆ ನೀಡುತ್ತಾರೆಯೇ ವಿನಃ ಯಾವುದೇ ಸ್ಪಷ್ಟ ಯೋಜನೆಯನ್ನು ರೈತರ ಮುಂದಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಜಮೀನುಗಳನ್ನು ಅನ್ಯಾಯವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಬಿಟ್ಟು, ಕಣಬರ್ಗಿ ರೈತರ ಜಮೀನುಗಳನ್ನು ಕೈಬಿಟ್ಟು ಹೊಸ ಪ್ಲಾನ್ ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
