ಕ್ಲಸ್ಟರ್ ಮಟ್ಟದ ಕಿಚನ್ ರಚನೆ ವಿರೋಧಿಸಿ ಹಾಗೂ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ವತಿಯಿಂದ ಬೆಳಗಾವಿ ಜಿಲ್ಲಾ ಪಂಚಾಯತ್ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಂಗಳೂರಿಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಜಮಾಯಿಸಿದ ನೂರಾರು ಬಿಸಿಯೂಟ ತಯಾರಕರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಎಂ. ಜೈನೇಖಾನ್, ಆರಂಭದಲ್ಲಿ ಕೇವಲ 300 ರೂಪಾಯಿ ಇದ್ದ ವೇತನವನ್ನು ನಿರಂತರ ಹೋರಾಟದ ಮೂಲಕವೇ ಇಲ್ಲಿಯವರೆಗೆ ಏರಿಸಿಕೊಳ್ಳಲಾಗಿದೆ. ಪ್ರಸ್ತುತ ಸಿಗುತ್ತಿರುವ 4,600 ರೂಪಾಯಿ ಅಲ್ಪ ವೇತನದಲ್ಲಿ ಕುಟುಂಬ ನಿರ್ವಹಣೆ ಅಸಾಧ್ಯವಾಗಿದ್ದು, ಕನಿಷ್ಠ 31,000 ರೂಪಾಯಿ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಮಕ್ಕಳು ಇರುವ ಶಾಲಾ ಸ್ಥಳದಲ್ಲೇ ತಾಜಾ ಅಡುಗೆ ಮಾಡಿ ಬಡಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಶಿಕ್ಷಣ ಇಲಾಖೆ ಕ್ಲಸ್ಟರ್ ಕಿಚನ್ ಹೆಸರಿನಲ್ಲಿ ಬಿಸಿಯೂಟವನ್ನು ಖಾಸಗೀಕರಣಗೊಳಿಸಲು ಹೊರಟಿರುವುದನ್ನು ತೀವ್ರವಾಗಿ ಖಂಡಿಸಿದರು.

ಬಿಸಿಯೂಟದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಡುಗೆ ಸಿಬ್ಬಂದಿಗೇ ವಹಿಸಬೇಕು ಮತ್ತು ಶಾಲೆಗಳಿಗೆ ಕುಕ್ಕುಟ ಮಹಾಮಂಡಳಿಯಿಂದಲೇ ಕೋಳಿ ಮೊಟ್ಟೆ ಸರಬರಾಜು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ಕಡಿತಗೊಳಿಸಿ ಲಕ್ಷಾಂತರ ಮಹಿಳೆಯರ ಬದುಕಿಗೆ ಕುತ್ತು ತರುತ್ತಿದ್ದು, ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಬೆಂಗಳೂರಿಗೆ ಬಂದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಖಜಾಂಚಿ ತುಳಸಮ್ಮ ಮಾಳದಕರ, ಕಾರ್ಯದರ್ಶಿ ಮಾಶಾಬಿ ಡಾಲಾಯತ್ ಹಾಗೂ ಪದಾಧಿಕಾರಿಗಳಾದ ಸಾವಿತ್ರಿ ಚಪ್ಪರದ, ಸುಮನ್ ಗಡಾದ, ಅನ್ನಪೂರ್ಣ ಹಲಮನಿ, ಪಾರ್ವತಿ ಕೌಜಲಗಿ, ಸುನೀತಾ ಚಾಳನ್ನವರ, ದೇವಕಿ ಹುಕ್ಕೇರಿ, ಸವಿತಾ ಬಾಲ್ಯಾಗೋಳ ಮತ್ತು ಭಾರತಿ ಜೋಗನ್ನವರ ಸೇರಿದಂತೆ ಅನೇಕರು ಭಾಗಿಯಾಗಿದ್ಧರು.
