ಬೆಳಗಾವಿಯ ಸ್ವಚ್ಛತೆ ಮತ್ತು ಸಮಗ್ರ ಅಭಿವೃದ್ಧಿಗೆ ಮತ್ತೊಂದು ಬೃಹತ್ ಯೋಜನೆ ಸಜ್ಜಾಗಿದೆ. ಸ್ಮಾರ್ಟ್ ಸಿಟಿ ವತಿಯಿಂದ ಸುಮಾರು 75 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಹತ್ವಾಕಾಂಕ್ಷೆಯ ‘ಸಿಟಿಸ್ 2.0’ (CITES 2.0) ಯೋಜನೆ ಕುರಿತು ಇಂದು ನಗರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಬೆಳಗಾವಿ ಸ್ಮಾರ್ಟ್ ಸಿಟಿ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ‘ಸಿಟಿಸ್ 2.0’ ಯೋಜನೆಯ ಕುರಿತು ಇಂದು ಮಹಾಪೌರ ಪ್ರೀತಿ ಕಾಮಕರ್, ಉಪಮಹಾಪೌರ ಹಣುಮಂತ ಕೊಂಗಾಲಿ, ಉತ್ತರ ಶಾಸಕ ಆಸೀಫ್ ಸೇಠ್ ಹಾಗೂ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರ ಪ್ರಮುಖ ಉಪಸ್ಥಿತಿಯಲ್ಲಿ ಮಹತ್ವದ ಸಭೆ ಜರುಗಿತು. ಸಭೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ, ವಿಲೇವಾರಿ ವಾಹನಗಳ ನಿಲುಗಡೆ, ಟ್ರಾನ್ಸ್ಫರ್ ಸ್ಟೇಷನ್ಗಳು ಹಾಗೂ ಬಯೋಗ್ಯಾಸ್ ಘಟಕಗಳ ಸ್ಥಾಪನೆ ಸೇರಿದಂತೆ ನಗರದ ನೈರ್ಮಲ್ಯಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ಸಭೆಯ ಬಳಿಕ ಮಾತನಾಡಿದ ದಕ್ಷಿಣ ಶಾಸಕ ಅಭಯ್ ಪಾಟೀಲ್, ಬೆಳಗಾವಿ ನಗರದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲರೂ ಕುಳಿತು ‘ಸಿಟಿಸ್ 2.0’ ಯೋಜನೆಯ ಸಾಧಕ-ಬಾಧಕ ಮತ್ತು ಲೋಪದೋಷಗಳ ಬಗ್ಗೆ ಚರ್ಚಿಸಿದ್ದೇವೆ ಎಂದರು. ಅಲ್ಲದೆ, ಇಂದು ಸಂಜೆ 6 ಗಂಟೆಯೊಳಗೆ ಯೋಜನೆಯ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಶೇ. 40, ರಾಜ್ಯ ಸರ್ಕಾರದ ಶೇ. 40 ಮತ್ತು ಮಹಾನಗರ ಪಾಲಿಕೆಯ ಶೇ. 20ರ ಅನುದಾನದೊಂದಿಗೆ ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಸಿದ್ಧಗೊಂಡಿದ್ದು, ಸೋಮವಾರದಂದು ಟೆಕ್ನಿಕಲ್ ಕಮಿಟಿ ಮುಂದೆ ಅನುಮೋದನೆಗೆ ಹೋಗಲಿದೆ ಎಂದು ತಿಳಿಸಿದರು.
ಇನ್ನು ಉತ್ತರ ಶಾಸಕ ಆಸೀಫ್ ಸೇಠ್ ಮಾತನಾಡಿ, ನಗರದ ಶುಚಿತ್ವ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ 75 ಕೋಟಿ ರೂ. ವೆಚ್ಚದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಎಲ್ಲಾ ಕಾರ್ಪೊರೇಟರ್ಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದ್ದು, ಅನುಮೋದನೆ ದೊರೆತ ತಕ್ಷಣವೇ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಮಹತ್ವದ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಸಂತೋಷ್ ಪೇಡ್ನೇಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸಾರೀಕಾ ಪಾಟೀಲ್, ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಉಪಾಯುಕ್ತೆ ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
