ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೆ ಧಾವಿಸಲು ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರ ಮುಂದಾಗಬೇಕಿದೆ. ಪ್ರಸಕ್ತ ಹಂಗಾಮಿನ ಕಬ್ಬಿಗೆ ಮೊದಲ ಕಂತಿನ ಹಣವಾಗಿ ಪ್ರತಿ ಟನ್ಗೆ ಕನಿಷ್ಠ 3,600 ರೂಪಾಯಿ ನಿಗದಿಪಡಿಸಬೇಕೆಂದು ರೈತ ಮುಖಂಡ ಚೂನ್ನಪ್ಪ ಪೂಜಾರಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ರೈತ ಮುಖಂಡ ಚುನ್ನಪ್ಪ ಪೂಜಾರಿ, ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟವನ್ನು ಸುದೀರ್ಘವಾಗಿ ವಿವರಿಸಿದರು. ಕಳೆದ ಸಾಲಿನಲ್ಲಿ ಸುದೀರ್ಘ ಹೋರಾಟದ ಮೂಲಕ 3,300 ರೂಪಾಯಿ ಪಡೆಯಲಾಗಿತ್ತು. ಆದರೆ ಈ ಬಾರಿ ಸಕ್ಕರೆಗೆ ಉತ್ತಮ ಮಾರುಕಟ್ಟೆ ಬೆಲೆಯಿದ್ದು, ಕೊರತೆಯೂ ಕಾಣಿಸಿಕೊಂಡಿದೆ. ಗಡಿಭಾಗದ ಮಹಾರಾಷ್ಟ್ರದಲ್ಲಿ ಹೆಚ್ಚಿನ ರಿಕವರಿ ಆಧಾರದ ಮೇರೆಗೆ ಕಬ್ಬಿಗೆ ಹೆಚ್ಚಿನ ದರ ನೀಡಲಾಗುತ್ತಿದೆ. ಹೀಗಾಗಿ ನಮ್ಮ ಭಾಗದ ಕಾರ್ಖಾನೆಗಳು ಹಾಗೂ ಸರ್ಕಾರಗಳು ಪ್ರತಿ ಟನ್ಗೆ ಕನಿಷ್ಠ 3,600 ರೂಪಾಯಿ ಮೊದಲ ಕಂತಾಗಿ ನೀಡಬೇಕು. ನಮ್ಮ ಅಂತಿಮ ಬೇಡಿಕೆ 4,000 ದಿಂದ 5,500 ರೂಪಾಯಿವರೆಗೆ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರವೇ ಎಸ್ಎಪಿ (SAP) ಯೋಜನೆ ಮೂಲಕ ಪ್ರತಿ ಟನ್ಗೆ 470 ರಿಂದ 480 ರೂಪಾಯಿ ಪ್ರೋತ್ಸಾಹಧನ ನೀಡಬೇಕು. ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಜೊತೆಗೆ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರ ಬೆಂಬಲಕ್ಕೂ ನಿಲ್ಲಬೇಕಿದೆ. ರೈತರ ಹಿತರಕ್ಷಣೆಗಾಗಿ ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿದ್ದು, ಹಕ್ಕಿನ ಹಣ ಸಿಗುವವರೆಗೆ ಸರ್ಕಾರ ಮತ್ತು ಕಾರ್ಖಾನೆ ಆಡಳಿತ ಮಂಡಳಿಗಳ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಚುನ್ನಪ್ಪ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
