ಬೆಳಗಾವಿಯ ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿ ರಸ್ತೆ ಸಂಚಾರ ಬಂದ್ ಮಾಡಲಾಗಿದೆ ಎಂಬ ವದಂತಿಗಳಿಗೆ ಈಗ ತೆರೆಬಿದ್ದಿದೆ. ಮಿಲಿಟರಿ ವ್ಯಾಪ್ತಿಯ ರಸ್ತೆಗಳು ಸಾರ್ವಜನಿಕರ ಬಳಕೆಗೆ ಎಂದಿನಂತೆ ಮುಕ್ತವಾಗಿವೆ ಎಂದು ಬ್ರಿಗೇಡಿಯರ್ ಗಿರೀಶ್ ಉಪಾಧ್ಯ ಸ್ಪಷ್ಟಪಡಿಸಿದ್ದಾರೆ.


ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ಸಭೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಸ್ಪಷ್ಟನೆ ನೀಡಿರುವ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ, ಮಿಲಿಟರಿ ಹದ್ದಿನಲ್ಲಿರುವ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಹರಡಿರುವ ಸುದ್ದಿ ಬರಿ ವದಂತಿಯಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ದಿನನಿತ್ಯದ ಅನುಕೂಲಕ್ಕಾಗಿ ಈ ಎಲ್ಲಾ ರಸ್ತೆಗಳು ಎಂದಿನಂತೆ ಮುಕ್ತವಾಗಿರುತ್ತವೆ ಎಂದು ತಿಳಿಸಿದ್ದಾರೆ. ಆದರೆ ಭದ್ರತೆ ಮತ್ತು ರಸ್ತೆಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಕ್ಯಾಂಟೋನ್ಮೆಂಟ್ ವ್ಯಾಪ್ತಿಯನ್ನು ಶಾರ್ಟ್ಕಟ್ ಮಾರ್ಗವಾಗಿ ಬಳಸುವ ಹೆವಿ ವಾಹನಗಳಿಗೆ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಮುಕ್ತ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪ್ರದೇಶದ ಸುರಕ್ಷತೆಗಾಗಿ ಸೂಕ್ತ ತಪಾಸಣೆ ನಡೆಸುವ ಹಕ್ಕು ಸೇನೆಗೆ ಕಾಯ್ದಿರಿಸಲ್ಪಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

