ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಸಾಂಸ್ಕೃತಿಕ ನಗರಿ ಬೆಳಗಾವಿಯಲ್ಲಿ ಮತ್ತೊಮ್ಮೆ ಐತಿಹಾಸಿಕ ಇತಿಹಾಸ ಮರುಕಳಿಸುತ್ತಿದೆ. ಜಾತಿ, ಧರ್ಮಗಳ ಹಂಗಿಲ್ಲದೆ ಒಟ್ಟಾಗಿ ಸೇರುವ ಪುಟಾಣಿಗಳು ಛತ್ರಪತಿ ಶಿವಾಜಿ ಮಹಾರಾಜರ ಅಜರಾಮರ ಇತಿಹಾಸವನ್ನು ಸಾರುವ ಅದ್ಭುತ ಕಿಲ್ಲಾ ಪ್ರತಿಕೃತಿಗಳನ್ನು ನಿರ್ಮಿಸಿ ಸಂಭ್ರಮಿಸುತ್ತಿದ್ದಾರೆ.

ದೀಪಾವಳಿ ಹಬ್ಬ ಬಂತೆಂದರೆ ಸಾಕು, ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿಯೂ ಚಿಣ್ಣರು ಯಾವುದೇ ಜಾತಿ, ಧರ್ಮ ಹಾಗೂ ಭಾಷೆಯ ಹಂಗಿಲ್ಲದೆ ಒಂದಾಗಿ ಸೇರಿ ಹಿಂದವಿ ಸ್ವರಾಜ್ಯದ ಇತಿಹಾಸವನ್ನು ಬಿಂಬಿಸುವ ಕಿಲ್ಲಾ ಪ್ರತಿಕೃತಿಗಳನ್ನು ನಿರ್ಮಿಸುವ ಸಡಗರದಲ್ಲಿ ಮಗ್ನರಾಗುತ್ತಾರೆ. ದುರ್ಗದುರ್ಗೇಶ್ವರಿ ರಾಯಗಢ, ತೋರಣಗಢ, ಪ್ರತಾಪಗಢ, ಅಜಿಂಕ್ಯ ತಾರಾ, ಸಿಂಧೂದುರ್ಗ ಹಾಗೂ ಪದ್ಮದುರ್ಗದಂತಹ ಐತಿಹಾಸಿಕ ಕೋಟೆಗಳ ಮಾದರಿಗಳನ್ನು ತಯಾರಿಸುವ ಮೂಲಕ ಮಕ್ಕಳು ತಮ್ಮ ಕಲಾ ನೈಪುಣ್ಯವನ್ನು ಮೆರೆಯುತ್ತಾರೆ. ಇಂದಿಗೂ ಅನೇಕ ಸಂಘ-ಸಂಸ್ಥೆಗಳು ಇಂತಹ ಸೃಜನಶೀಲ ಸ್ಪರ್ಧೆಗಳನ್ನು ಆಯೋಜಿಸಿ, ಪುಟ್ಟ ಮಕ್ಕಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಮತ್ತು ಹಿಂದವಿ ಸ್ವರಾಜ್ಯದ ಹೆಮ್ಮೆಯ ಇತಿಹಾಸವನ್ನು ಯುವ ಪೀಳಿಗೆಯಲ್ಲಿ ತಾಜಾ ಮಾಡುವ ಶ್ಲಾಘನೀಯ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ.

ಬೆಳಗಾವಿಯ ವಿವಿಧ ಭಾಗಗಳಲ್ಲಿ ಯುವಕರು ಮತ್ತು ಮಕ್ಕಳು ತಮ್ಮ ಸ್ನೇಹಿತರ ಬಳಗದೊಂದಿಗೆ ಸೇರಿ ತಿಂಗಳುಗಳ ಮುಂಚೆಯಿಂದಲೇ ಈ ಐತಿಹಾಸಿಕ ಕಿಲ್ಲಾಗಳ ರಚನೆಯಲ್ಲಿ ನಿರತರಾಗಿದ್ದಾರೆ. ಗವಳಿಯಲ್ಲಿ ಪ್ರತಾಪಗಡ, ಕಂಗ್ರಾಳ ಗಲ್ಲಿಯಲ್ಲಿ ಪದ್ಮದುರ್ಗ ಹಾಗೂ ಪಾಂಗುಳ ಗಲ್ಲಿಯಲ್ಲಿ ರಾಯಗಢದಂತಹ ಪ್ರಸಿದ್ಧ ಕೋಟೆಗಳ ಅದ್ಭುತ ಪ್ರತಿಕೃತಿಗಳನ್ನು ಹಲವು ದಿನಗಳ ಪರಿಶ್ರಮದಿಂದ ನಿರ್ಮಿಸಲಾಗಿದೆ. ಆಕಾಶದಿಂದ ನೋಡಿದರೆ ಬಟರ್ಫ್ಲೈ ಆಕಾರದಲ್ಲಿ ಗೋಚರಿಸುವ ಪ್ರತಾಪಗಢ ಹಾಗೂ ನೀರಿನೊಳಗೆ ಕಂಗೊಳಿಸುವ ಪದ್ಮದುರ್ಗದಂತಹ ಕೋಟೆಗಳ ಮಾದರಿಗಳು ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ. ವಿವಿಧ ದಿನಗಳಲ್ಲಿ ಈ ಐತಿಹಾಸಿಕ ಕೃತಿಗಳ ಉದ್ಘಾಟನೆ ನಡೆಯುತ್ತಿದ್ದು, ಬೆಳಗಾವಿಯಾದ್ಯಂತ ದೀಪಾವಳಿಯ ಹಬ್ಬದ ಸಂಭ್ರಮವನ್ನು ಇದು ಇಮ್ಮಡಿಗೊಳಿಸಿದೆ.

ದೀಪಾವಳಿಯ ಸಂದರ್ಭದಲ್ಲಿ ಕಿಲ್ಲಾಗಳ ನಿರ್ಮಾಣ, ಪೂಜೆ ಮತ್ತು ದೀಪೋತ್ಸವದ ಆಚರಣೆಯ ಹಿಂದೆ ಆಳವಾದ ಐತಿಹಾಸಿಕ ಹಿನ್ನೆಲೆಯಿದೆ. ಹಿಂದಾನಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮೊಘಲರ ವಿರುದ್ಧದ ತೀವ್ರ ಹೋರಾಟದಲ್ಲಿ ಜಯಗಳಿಸಿ, ಅಮಾವಾಸ್ಯೆಯ ಪವಿತ್ರ ದಿನದಂದೇ ಅನೇಕ ಪ್ರಮುಖ ಕಿಲ್ಲಾಗಳನ್ನು ವಶಪಡಿಸಿಕೊಳ್ಳುತ್ತಿದ್ದರು. ಹಿಂದವಿ ಸ್ವರಾಜ್ಯದಲ್ಲಿ ಮೊಘಲರ ಕ್ರೂರ ಅಟ್ಟಹಾಸ ಸಂಪೂರ್ಣವಾಗಿ ಅಳಿದುಹೋಗಿ ಪ್ರಜೆಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿದ ಐತಿಹಾಸಿಕ ಸವಿನೆನಪಿಗಾಗಿ ಆ ದಿನ ಕೋಟೆಗಳನ್ನು ಸಾವಿರಾರು ಹಣತೆಗಳ ದೀಪಗಳಿಂದ ಅಲಂಕರಿಸಿ ವಿಜಯೋತ್ಸವದ ಸಂಭ್ರಮವನ್ನು ಆಚರಿಸಲಾಗುತ್ತಿತ್ತು. ಈ ಪರಂಪರೆಯು ಇಂದಿಗೂ ಮುಂದುವರಿದಿದ್ದು, ಇತಿಹಾಸದ ನೆನಪುಗಳನ್ನು ಇಂದಿನ ಆಧುನಿಕ ಯುಗದಲ್ಲೂ ಜೀವಂತವಾಗಿರಿಸಲು ಪ್ರಮುಖ ಪ್ರೇರಣೆಯಾಗಿದೆ.
