Belagavi

ಟೇಂಗಿನಕೇರಿ ಗಲ್ಲಿಯಲ್ಲಿ 8 ದಿನಗಳಿಂದ ಹಗಲಲ್ಲೇ ಉರಿಯುತ್ತಿವೆ ವಿದ್ಯುತ್ ದೀಪಗಳು!

Share

ಬೆಳಗಾವಿ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಟೇಂಗಿನಕೇರಿ ಗಲ್ಲಿ ಕ್ರಾಸ್ ಪ್ರದೇಶದಲ್ಲಿ ಕಳೆದೆಂಟು ದಿನಗಳಿಂದ ಹಗಲು ಹೊತ್ತಿನಲ್ಲೂ ಸುಖಾಸುಮ್ಮನೆ ವಿದ್ಯುತ್ ದೀಪಗಳು ಉರಿಯುತ್ತಿವೆ. ಸಾರ್ವಜನಿಕ ಆಸ್ತಿಯಾದ ವಿದ್ಯುತ್ ಅಪವ್ಯಯವಾಗುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸ್ಥಳೀಯ ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ನಗರದ ಟೇಂಗಿನಕೇರಿ ಗಲ್ಲಿ ಕಾಂಡೋ ಕ್ರಾಸ್ ವ್ಯಾಪ್ತಿಯಲ್ಲಿ ಕಳೆದ ಎಂಟು ದಿನಗಳಿಂದ ಸತತವಾಗಿ ಹಗಲು ವೇಳೆಯಲ್ಲೂ 15 ರಿಂದ 20 ವಿದ್ಯುತ್ ಕಂಬಗಳ ಪಥದೀಪಗಳು ಉರಿಯುತ್ತಿರುವುದು ಬೆಳಕಿಗೆ ಬಂದಿದೆ. ಒಂದೆಡೆ ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ‘ವಿದ್ಯುತ್ ಉಳಿಸಿ, ಜಾಗರೂಕರಾಗಿ ಬಳಸಿ’ ಎಂದು ಜಾಗೃತಿ ಮೂಡಿಸುತ್ತಿದೆ. ಆದರೆ, ಇನ್ನೊಂದೆಡೆ ಸ್ವತಃ ಪಾಲಿಕೆಯೇ ತನ್ನ ಪಥದೀಪಗಳನ್ನು ಹಗಲಿನಲ್ಲಿ ಬಂದ್ ಮಾಡದೇ ಸಾವಿರಾರು ಯೂನಿಟ್ ವಿದ್ಯುತ್ ಪೋಲು ಮಾಡುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಕಳೆದ ಒಂದು ವಾರದಿಂದ ಈ ರೀತಿಯಾಗಿ ವಿದ್ಯುತ್ ಪೋಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಾಲಿಕೆ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಹಗಲಿನಲ್ಲಿ ಉರಿಯುವ ಬೀದಿ ದೀಪಗಳನ್ನು ಬಂದ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

Tags:

error: Content is protected !!