Belagavi

ಕಬ್ಬಿನ ದರ ಹೆಚ್ಚಳಕ್ಕೆ ತಕ್ಷಣ ಸರ್ಕಾರ ಕ್ರಮಕೈಗೊಳ್ಳಲಿ; ಸಂಸದ ಜಗದೀಶ್ ಶೆಟ್ಟರ್

Share

ರಾಜ್ಯ ಸರ್ಕಾರ ನಿಗದಿಪಡಿಸಿರುವ ಕಬ್ಬಿನ ದರಕ್ಕೆ ರೈತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಸಂಸದ ಜಗದೀಶ್ ಶೆಟ್ಟರ್ ಅವರು ಅನ್ನದಾತರ ಪರ ಧ್ವನಿ ಎತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರ ಶ್ರಮಕ್ಕೆ ತಕ್ಕಂತೆ ನ್ಯಾಯಯುತ ಬೆಲೆ ಸಿಗುವಂತೆ ಸರ್ಕಾರ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದ್ದಾರೆ.

ಕಬ್ಬಿಗೆ ಪ್ರತಿ ಟನ್‌ಗೆ ₹೩,೬೦೦ ದರವನ್ನು ಸರ್ಕಾರ ಪ್ರಕಟಿಸಿದೆಯಾದರೂ, ರೈತ ಹೋರಾಟಗಾರರು ಪ್ರತಿ ಟನ್‌ಗೆ ₹೫,೫೦೦ ದರ ನಿಗದಿಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಸರ್ಕಾರ ಮತ್ತು ರೈತರ ನಡುವೆ ಪೂರ್ಣಪ್ರಮಾಣದ ಒಮ್ಮತ ಮೂಡಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು. ರಾಜ್ಯದಲ್ಲೇ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಹಾಗೂ ಅತ್ಯುತ್ತಮ ಇಳುವರಿ ನೀಡುವ ಪ್ರಮುಖ ಕಬ್ಬು ಬೆಳೆಯುವ ಜಿಲ್ಲೆಯಾಗಿ ಬೆಳಗಾವಿ ಗುರುತಿಸಿಕೊಂಡಿದೆ. ಕೃಷಿ ವೆಚ್ಚಕ್ಕೆ ತಕ್ಕಂತೆ ರೈತರಿಗೆ ಯೋಗ್ಯ ಹಾಗೂ ಲಾಭದಾಯಕ ಬೆಲೆ ನೀಡುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆ ಮತ್ತು ನೀತಿಯಾಗಬೇಕು ಎಂದು ಅವರು ಪ್ರತಿಪಾದಿಸಿದರು.

ಪ್ರಸ್ತುತ ದರ ನಿಗದಿಯಿಂದ ರೈತ ಸಮುದಾಯದಲ್ಲಿ ಅಸಮಾಧಾನ ಮುಂದುವರಿದಿದ್ದು, ಪರಿಸ್ಥಿತಿಯನ್ನು ಸರಿಪಡಿಸಲು ರಾಜ್ಯ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ಇನಿಷಿಯೇಟಿವ್ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಶೆಟ್ಟರ್ ಆಗ್ರಹಿಸಿದರು. ರೈತರ ಈ ನ್ಯಾಯಯುತ ಹೋರಾಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರದಿಂದ ಸಿಗಬೇಕಾದ ಎಲ್ಲ ಅಗತ್ಯ ಸಹಕಾರ ಹಾಗೂ ಅನುದಾನವನ್ನು ಕೊಡಿಸಲು ತಾವು ಸದಾ ಸಿದ್ಧವಿದ್ದು, ಅದಕ್ಕಾಗಿ ಶ್ರಮಿಸುವುದಾಗಿ ಅಭಯ ನೀಡಿದರು. ಮುಂಬರುವ ದಿನಗಳಲ್ಲಿ ರೈತರಿಗೆ ಮತ್ತಷ್ಟು ಉತ್ತಮ ಹಾಗೂ ಸಮರ್ಪಕ ಬೆಲೆ ಸಿಗುವಂತಹ ಖಾಯಂ ವ್ಯವಸ್ಥೆಯನ್ನು ಸರ್ಕಾರ ತಕ್ಷಣವೇ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags:

error: Content is protected !!