ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಣ್ಣಿನ ಕೋಟೆ ಕಟ್ಟುವ ಸಾಂಪ್ರದಾಯಿಕ ಕಲೆಗೆ ಮರುಜೀವ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಮಾವಳ ಸೈನಿಕರ ಮೂರ್ತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಹಬ್ಬದ ಕೊಡುಗೆಯಾಗಿ ಮಕ್ಕಳು ಐತಿಹಾಸಿಕ ಕೋಟೆಗಳನ್ನು ನಿರ್ಮಿಸಲು ಉತ್ಸಾಹದಿಂದ ಸಜ್ಜಾಗುತ್ತಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿಯ ಪ್ರಮುಖ ವಾಣಿಜ್ಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಇದರ ನಡುವೆಯೇ ಮಕ್ಕಳನ್ನು ಆಕರ್ಷಿಸುವ ಕೋಟೆ ಅಲಂಕಾರಿಕ ಸಾಮಗ್ರಿಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಹಬ್ಬದ ದಿನಗಳಲ್ಲಿ ಮನೆಗಳ ಮುಂದೆ ಹಾಗೂ ಓಣಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ಸಾಹಸವನ್ನು ನೆನಪಿಸುವ ಸುಂದರ ಕೋಟೆಗಳನ್ನು ನಿರ್ಮಿಸುವುದು ಇಲ್ಲಿಯ ಮಕ್ಕಳ ನೆಚ್ಚಿನ ಕಾಯಕ. ಈ ನಿಟ್ಟಿನಲ್ಲಿ ನಗರದ ಪ್ರಸಿದ್ಧ ಪಾಂಗುಳ್ ಗಲ್ಲಿ, ಗಣಪತ್ ಗಲ್ಲಿ ಮತ್ತು ಖಡೆ ಬಜಾರ್ಗಳಲ್ಲಿ ಕೋಟೆ ನಿರ್ಮಾಣಕ್ಕೆ ಅಗತ್ಯವಿರುವ ವಿವಿಧ ನಮೂನೆಯ ಕಲಾತ್ಮಕ ಸಾಮಗ್ರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಮಾರುಕಟ್ಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳು, ಮಾವಳ ಸೈನಿಕರು, ಕುದುರೆ ಸವಾರರು ಹಾಗೂ ಫಿರಂಗಿಗಳ ಸಣ್ಣ ಮಾದರಿಯ ಪ್ರತಿಮೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಮಕ್ಕಳು ತಮ್ಮ ಹೆತ್ತವರೊಂದಿಗೆ ಮಾರುಕಟ್ಟೆಗೆ ಆಗಮಿಸಿ ತಮ್ಮಿಷ್ಟದ ಸಾಮಗ್ರಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ದೀಪಾವಳಿಯಲ್ಲಿ ಕೋಟೆ ಕಟ್ಟುವ ಈ ಪರಂಪರೆಯು ಯುವ ಪಳಿಗೆಗೆ ಮಹಾರಾಜರ ಶೌರ್ಯದ ಇತಿಹಾಸ ಮತ್ತು ಮರಾಠಾ ಸಾಮ್ರಾಜ್ಯದ ಕೋಟೆಗಳ ಮಹತ್ವವನ್ನು ತಿಳಿಸಿಕೊಡುತ್ತಿದ್ದು, ಬೆಳಗಾವಿ ಮಾರುಕಟ್ಟೆಯಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕಳೆ ತಂದಿದೆ.
