Belagavi

ಬೆಳಗಾವಿಯ ಪಾಟೀಲ್ ಮಳಾದಲ್ಲಿ ನಾಲಾ, ಚರಂಡಿ ಅಭಿವೃದ್ಧಿಗೆ ಶಾಸಕ ಆಸೀಫ್ ಸೇಠ್ ಚಾಲನೆ

Share

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಪಾಟೀಲ್ ಮಳಾ ಪ್ರದೇಶದಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ನಾಲಾ ಹಾಗೂ ಚರಂಡಿ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸಿವೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಾಲಾ ಮತ್ತು ಡ್ರೈನ್ ಕಾಮಗಾರಿಗಳಿಗೆ ಶಾಸಕ ಆಸೀಫ್ ಸೇಠ್ ಇ ಇಂದು ಚಾಲನೆ ನೀಡುವ ಮೂಲಕ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ್ದಾರೆ.

ಬೆಳಗಾವಿಯ ಪಾಟೀಲ್ ಮಳಾ ಪ್ರದೇಶದಲ್ಲಿ ಮಳೆಗಾಲದಲ್ಲಿ ಎದುರಾಗುತ್ತಿದ್ದ ಹೂಳು ಹಾಗೂ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಆಸೀಫ್ ಸೇಠ್ ಬೃಹತ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ವಿಶೇಷ ಅನುದಾನದ (CM Special Fund) ಅಡಿಯಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು 1.30 ಕೋಟಿ ರೂಪಾಯಿ ವೆಚ್ಚದಲ್ಲಿ 153 ಮೀಟರ್ ಉದ್ದದ ಬೃಹತ್ ನಾಲಾ ನಿರ್ಮಾಣ ಹಾಗೂ ಸಂಪೂರ್ಣ ಹೂಳು ತೆಗೆಯುವ ಪ್ರಕ್ರಿಯೆ ಇಂದಿನಿಂದಲೇ ಆರಂಭಗೊಂಡಿದೆ. ಇದರ ಜೊತೆಗೆ, 20 ಲಕ್ಷ ರೂಪಾಯಿ ವೆಚ್ಚದಲ್ಲಿ 365 ಮೀಟರ್ ಉದ್ದದ ನೂತನ ಚರಂಡಿ (ಡ್ರೈನ್) ನಿರ್ಮಾಣಕ್ಕೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡರೆ ಪಾಟೀಲ್ ಮಳಾ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಬಹುದಿನಗಳ ಸಮಸ್ಯೆ ಶಮನವಾಗಲಿದೆ.

ಸ್ಥಳ ಪರಿಶೀಲನೆ ನಡೆಸಿದ ವೇಳೆ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳಿಂದ ನಾಲಾಗೆ ಸಂಬಂಧಿಸಿದ ವಿವಿಧ ಕುಂದುಕೊರತೆಗಳನ್ನು ಶಾಸಕರು ನೇರವಾಗಿ ಆಲಿಸಿದರು. ಕಾಮಗಾರಿಗಳು ನಡೆಯುವಾಗ ಸಾರ್ವಜನಿಕರ ದಿನನಿತ್ಯದ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ ಶಾಸಕರು, ಸ್ಥಳೀಯರ ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ನಗರಸೇವಕಿ ವೈಶಾಲಿ ಭಾತಕಾಂಡೆ ಸೇರಿದಂತೆ ಹಲವು ಪ್ರಮುಖ ನಾಯಕರು, ಪಾಲಿಕೆ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

Tags:

error: Content is protected !!