Belagavi

ರಾಣಿ ಚೆನ್ನಮ್ಮ ವೃತ್ತದಲ್ಲಿ ಧರಣಿನಿರತ ರೈತರು ವಶಕ್ಕೆ!!!

Share

ಕಬ್ಬು ಬೆಳೆಗಾರರ ಚಳುವಳಿಯ ಪ್ರಮುಖ ಮುಖಂಡರಾದ ಚೂನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಸೇರಿದಂತೆ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತರು ಬೊಬ್ಬೆ ಹೊಡೆಯುವ ಮೂಲಕ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಷೇಧಾಜ್ಞೆಯ ನಡುವೆಯೂ ಮಾನವ ಸರಪಳಿ ರಚಿಸಲು ಮುಂದಾದ ರೈತರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ವ್ಯಾನ್‌ನಲ್ಲಿ ಕರೆದೊಯ್ದ ಘಟನೆ ನಡೆದಿದೆ.

ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಚಳುವಳಿಯ ಮುಖಂಡರಾದ ಚೂನ್ನಪ್ಪ ಪೂಜಾರಿ ಮತ್ತು ಶಶಿಕಾಂತ ಗುರೂಜಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮವು ಜಿಲ್ಲೆಯಾದ್ಯಂತ ರೈತರ ಆಕ್ರೋಶದ ಕಿಚ್ಚಿಗೆ ಕಾರಣವಾಗಿದೆ. ಈ ನೀತಿಯನ್ನು ಖಂಡಿಸಿ ನೂರಾರು ರೈತರು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಿದರು.
ಸರ್ಕಾರದ ರೈತ ವಿರೋಧಿ ಧೋರಣೆಯ ವಿರುದ್ಧ ತೀವ್ರವಾಗಿ ಬೊಬ್ಬೆ ಹೊಡೆದ ಪ್ರತಿಭಟನಾಕಾರರು, ಬಂಧಿತ ಮುಖಂಡರನ್ನು ಯಾವುದೇ ಷರತ್ತಿಲ್ಲದೆ ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ವೃತ್ತದಲ್ಲೇ ಕುಳಿತು ಘೋಷಣೆಗಳನ್ನು ಕೂಗಿದರು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ, ಪ್ರತಿಭಟನಾನಿರತ ರೈತರು ಪ್ರಮುಖ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆಗೆ ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ನಿಷೇಧಾಜ್ಞೆ ಜಾರಿಯಲ್ಲಿರುವುದನ್ನು ನೆನಪಿಸಿ ರೈತರ ಮನವೊಲಿಸಲು ತೀವ್ರ ಯತ್ನ ನಡೆಸಿದರು. ಆದರೆ, ಮುಖಂಡರ ಬಿಡುಗಡೆಗೆ ಪಟ್ಟು ಹಿಡಿದ ರೈತರು ಪೊಲೀಸರ ಮನವಿಯನ್ನು ಸಂಪೂರ್ಣವಾಗಿ ಪುರಸ್ಕರಿಸದೆ ಧರಣಿಯನ್ನು ಮುಂದುವರಿಸಿದರು. ಅಂತಿಮವಾಗಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮುಂದುವರಿಸಿದ ನೂರಾರು ರೈತರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ಗಳಲ್ಲಿ ಕರೆದೊಯ್ದರು.

Tags:

error: Content is protected !!