BELAGAVI

ರೈತರ ಕಣ್ಣು ತಪ್ಪಿಸಿ ಸಕ್ಕರೆ ಕಳ್ಳಸಾಗಣೆ, ಹೆದ್ದಾರಿಯಲ್ಲಿ ಲಾರಿ ತಡೆದು ಆಕ್ರೋಶ!!!

Share

 

  • ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಉಗ್ರ ಹೋರಾಟ
  • ದರ ನಿಗದಿಯಾಗದೆ ಸಕ್ಕರೆ ಮಾರಾಟಕ್ಕೆ ವಿರೋಧ
  • ಭೂತರಾಮನಹಟ್ಟಿಯಲ್ಲಿ ಸಕ್ಕರೆ ಲಾರಿ ವಶಕ್ಕೆ ಪಡೆದ ರೈತರು
  • ರೈತರ ಕಣ್ಣುತಪ್ಪಿಸಿ ಸಕ್ಕರೆ ಕಳ್ಳಸಾಗಣೆ ಆರೋಪ

 

ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿಯಾಗುವವರೆಗೆ ಸಕ್ಕರೆ ಮಾರಾಟ ಮಾಡಬಾರದು ಎಂಬ ರೈತರ ಹೋರಾಟದ ನಡುವೆಯೂ, ಬೆಳಗಾವಿಯಲ್ಲಿ ಕಳ್ಳಮಾರ್ಗದಿಂದ ಸಕ್ಕರೆ ಸಾಗಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಭೂತರಾಮನಹಟ್ಟಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕ್ಕರೆ ತುಂಬಿದ್ದ ಲಾರಿಯನ್ನು ತಡೆದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ದರ ನಿಗದಿಯಾಗುವವರೆಗೆ ಯಾವುದೇ ಕಾರಣಕ್ಕೂ ಗೋದಾಮಿನಿಂದ ಸಕ್ಕರೆ ಹೊರಗೆ ಕಳುಹಿಸಬಾರದು ಎಂದು ರೈತರು ಈಗಾಗಲೇ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ, ತಮ್ಮ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಜಾಗರೂಕರಾಗಿದ್ದ ರೈತರು ಹಲವು ಕಾರ್ಖಾನೆಗಳ ಗೋದಾಮುಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ರೈತರ ಕಣ್ಣು ತಪ್ಪಿಸಿ ಸಕ್ಕರೆಯನ್ನು ಕಳ್ಳಸಾಗಣೆ ಮಾಡಲು ಕಾರ್ಖಾನೆಗಳ ಆಡಳಿತ ಮಂಡಳಿ ಮುಂದಾಗಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಇಂದು ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳಮಾರ್ಗವಾಗಿ ಸಕ್ಕರೆ ಹೊತ್ತೊಯ್ಯುತ್ತಿದ್ದ ಲಾರಿಯನ್ನು ಗುರುತಿಸಿದ ರೈತರು, ಕೂಡಲೇ ವಾಹನವನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ರೈತರ ಕೋರಿಕೆಯನ್ನು ಸಂಪೂರ್ಣವಾಗಿ ಧಿಕ್ಕರಿಸಿ ಮಾಲೀಕರು ಸಕ್ಕರೆ ಮಾರಾಟಕ್ಕೆ ಯತ್ನಿಸಿರುವುದು ಹೋರಾಟಗಾರರ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ರೈತರು ಸ್ಥಳದಲ್ಲಿ ಜಮಾಯಿಸಿದ್ದು, ಘಟನಾ ಸ್ಥಳದಲ್ಲಿ ತೀವ್ರ ಉದ್ವಿಗ್ನತೆ ಹಾಗೂ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

 

 

Tags:

error: Content is protected !!