ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಲ್ಲಾಡಳಿತದ ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ‘ಜೈಲ್ ಭರೋ’ ಚಳುವಳಿ ನಡೆಸುತ್ತಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಬ್ಬಿಗೆ ಪ್ರತಿ ಟನ್ಗೆ 5,500 ರೂಪಾಯಿ ನಿಗದಿತ ದರ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ‘ಜೈಲ್ ಭರೋ’ ಹೋರಾಟ ಇಂದು ಎರಡನೇ ದಿನಕ್ಕೂ ಮುಂದುವರಿದಿದ್ದು, ಬೆಳಗಾವಿ ನಗರದತ್ತ ಧಾವಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ತಡೆ ನಡೆಸದಂತೆ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ನಿರ್ಬಂಧಿತ ಆದೇಶ ಹೊರಡಿಸಿದ್ದರೂ, ಅದನ್ನು ಲೆಕ್ಕಿಸದ ನೂರಾರು ರೈತರು ಪಾದಯಾತ್ರೆ ಮೂಲಕ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾಗೆ ಆಗಮಿಸಿದ್ದಾರೆ. ಹೆದ್ದಾರಿಯಲ್ಲೇ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ರೈತರು, ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹತ್ತರಗಿ ಟೋಲ್ ಬಳಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇನ್ನು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟದ ರೂವಾರಿ ಚೂನ್ನಪ್ಪ ಪೂಜಾರಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ತಂದವರೇ ರೈತರು ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಎಚ್ಚರಿಸಿದರು. ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ನಡೆದ ಸಭೆಯ ಚರ್ಚೆಯ ಕುರಿತು ಉಲ್ಲೇಖಿಸಿದ ಅವರು, ಸರ್ಕಾರ ಕೂಡಲೇ ಸೂಕ್ತ ಬೆಲೆ ಘೋಷಣೆ ಮಾಡಬೇಕು. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರ ಬಳಿ ಸಮಯವಿದ್ದರೆ ಕೇವಲ ಒಂದು ಗಂಟೆಯಲ್ಲಿ ಬೆಳಗಾವಿಗೆ ಆಗಮಿಸಿ ರೈತರ ಹಿತ ಕಾಯುವ ನಿರ್ಧಾರ ಕೈಗೊಳ್ಳಬಹುದು. ಒಂದು ವೇಳೆ ನಾಳೆ ಒಳಗಾಗಿ ರೈತರ ಪರವಾಗಿ ಯೋಗ್ಯ ಬೆಲೆ ಘೋಷಣೆ ಮಾಡದಿದ್ದರೆ, ರಾಜ್ಯಾದ್ಯಂತ ಸುಮಾರು 1 ಕೋಟಿಗೂ ಹೆಚ್ಚು ಜನ ‘ಜೈಲ್ ಭರೋ’ ಚಳುವಳಿಗೆ ಧುಮುಕಲಿದ್ದಾರೆ. ಅಷ್ಟೇ ಅಲ್ಲದೆ, ಮುಂಬರುವ ಅಧಿವೇಶನದ ವೇಳೆ ಬೆಳಗಾವಿಗೆ ಸಿಎಂ ಅವರಿಗೆ ಕಾಲಿಡಲು ಬಿಡುವುದಿಲ್ಲ ಹಾಗೂ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

