ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ತಮ್ಮದೇ ಸೋದರಮಾವ ಸೇರಿದಂತೆ ಹಲವವರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ದರೋಡೆ ಮಾಡಿಸಿದ್ದ ಅಳಿಯ ಹಾಗೂ ಆತನ ಗ್ಯಾಂಗ್ ಅನ್ನು ಬೆಳಗಾವಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಖಾರದಪುಡಿ ಎರಚಿ ನಡೆದಿದ್ದ ₹2.68 ಕೋಟಿ ದರೋಡೆ ಪ್ರಕರಣದಲ್ಲಿ 7 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ₹2.39 ಕೋಟಿ ನಗದು ಮತ್ತು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ತಿಳಿಸಿದ್ದಾರೆ.

ಮೂಡಲಗಿ ತಾಲೂಕಿನ ಸಂಗನಕೇರಿಯ ಪ್ರಮುಖ ಆರೋಪಿ ಚಿದಾನಂದ ಸಿದ್ಧಾರೂಢ ಕುರಬೇಟ, 1 ಲಕ್ಷ ರೂಪಾಯಿ ನೀಡಿದರೆ 1,30,000 ರೂಪಾಯಿ ಜಮಾ ಮಾಡುವುದಾಗಿ ನಂಬಿಸಿ ತನ್ನ ಸೋದರಮಾವ ಹಾಗೂ ಸಂಬಂಧಿಕರಿಗೆ ವಂಚನೆಯ ಜಾಲ ಹೆಣೆದಿದ್ದನು. ಅಳಿಯ ಚಿದಾನಂದನ ಮಾತು ನಂಬಿದ ಸೋದರಮಾವ ಚನ್ನಬಸಪ್ಪ ಹಾಗೂ ದೂರುದಾರರು ಒಟ್ಟುಗೂಡಿ ₹2.68 ಕೋಟಿ ಸಂಗ್ರಹಿಸಿದ್ದರು. ಈ ಹಣವನ್ನು ತಾನೇ ಸಂಚು ರೂಪಿಸಿ ದರೋಡೆ ಮಾಡಿಸುವ ದುರುದ್ದೇಶದಿಂದ ಅಕ್ಟೋಬರ್ 30ರಂದು ಬೀರಪ್ಪ ವನಸನ್ನಿ ಅವರ ಶೆಡ್ಗೆ ತರಿಸಿಕೊಂಡಿದ್ದನು. ಹಣ ಎಣಿಸುತ್ತಿದ್ದಾಗ ಪೂರ್ವನಿಯೋಜಿತ ಯೋಜನೆಯಂತೆ ಸಂಜು ಅರಭಾವಿ, ರಾಜಾರಾಮ ಮಾಳ್ಯಾಗೋಳ, ರಮೇಶ ಮಾಳ್ಯಾಗೋಳ, ವಿಠ್ಠಲ ಮಾಳ್ಯಾಗೋಳ, ಪ್ರಕಾಶ ಮೇಳವಂಕಿ, ರಾಘವೇಂದ್ರ ಕೊಪ್ಪದ, ರಾಮಪ್ಪಾ ತಳವಾರ ಹಾಗೂ ಮಾರುತಿ ಅರಭಾವಿ ರಾತ್ರಿ 11:45ಕ್ಕೆ ಶೆಡ್ಗೆ ಅಕ್ರಮ ಪ್ರವೇಶ ಮಾಡಿ, ಚಿದಾನಂದನ ಸೋದರಮಾವನ ಕಣ್ಣಿಗೆ ಖಾರದಪುಡಿ ಎರಚಿ, ಹಗ್ಗದಿಂದ ಹೊಡೆದು 5 ಬ್ಯಾಗ್ಗಳಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿದ್ದರು.

ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಬೆಳಗಾವಿ ಎಸ್ಪಿ ಕೆ. ರಾಮರಾಜನ್, ಹೆಚ್ಚುವರಿ ಎಸ್ಪಿ ಆರ್. ಬಿ. ಬಸರಗಿ ಹಾಗೂ ಗೋಕಾಕ ಡಿಎಸ್ಪಿ ರವಿ ಡಿ. ನಾಯಕ ಮಾರ್ಗದರ್ಶನದಲ್ಲಿ ಮೂಡಲಗಿ ಸಿಪಿಐ ಶೈಲೇಶ ಬ್ಯಾಕೋಡ ನೇತೃತ್ವದ ತನಿಖಾ ತಂಡ ಕಾರ್ಯಪ್ರವೃತ್ತವಾಗಿ ಚಿದಾನಂದ ಸೇರಿದಂತೆ 07 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದೆ. ಅವರಿಂದ ₹2,39,00,000/- ನಗದು, 2 ಬೈಕ್ ಹಾಗೂ 1 ಕಾರನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ರಜೆಯಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಪಾತ್ರವೂ ಕಂಡುಬಂದಿದ್ದು, ಅವರನ್ನು ಸ್ವತಃ ಎಸ್ಪಿ ವಿಚಾರಣೆ ನಡೆಸಿದ್ದಾರೆ. ಇನ್ನು ಈ ಘಟನೆಗೆ ಯಾವುದೇ ಶಾಸಕರ ನಂಟಿಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು, ಸಾರ್ವಜನಿಕರು ಇಂತಹ ಮನಿ ಡಬ್ಲಿಂಗ್ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

