ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಭಾರತೀಯ ಕೃಷಿಕ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ರೈತರ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾಧ್ಯಕ್ಷ ಸಿದ್ಧಗೌಡ ಮೋದಗಿ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ರೈತರಿಂದ ಮನವಿ ಸ್ವೀಕರಿಸಿ ಅಧಿಕಾರಿಗಳ ಸಭೆ ಕರೆಯುವ ಭರವಸೆ ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವ ಮತ್ತು ಅಧಿಕಾರಿಗಳ ತರಬೇತಿಯಲ್ಲಿದ್ದ ಕಾರಣಕ್ಕಾಗಿ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಈಗ ಪುನರಾರಂಭಿಸಲಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ತೀವ್ರ ಕುಸಿತ ಕಂಡಿದ್ದರೂ ದಲ್ಲಾಳಿಗಳ ಕಮಿಷನ್ ಹಾವಳಿ ಮುಂದುವರಿದಿದ್ದು, ತೂಕದಲ್ಲಿ ಮೋಸ ಹಾಗೂ ಅಧಿಕೃತ ರಶೀದಿ ನೀಡದೆ ರೈತರಿಗೆ ವಂಚಿಸಲಾಗುತ್ತಿದೆ ಎಂದು ರೈತ ಮುಖಂಡ ಸಿದ್ಧಗೌಡ ಮೋದಗಿ ಆಕ್ರೋಶ ವ್ಯಕ್ತಪಡಿಸಿದರು. ಇದರೊಂದಿಗೆ, 2021ರ ಆದೇಶದಂತೆ ಸಕ್ಕರೆ ಆಯುಕ್ತರ ಕಚೇರಿಯನ್ನು ತಕ್ಷಣವೇ ಬೆಳಗಾವಿಗೆ ಸ್ಥಳಾಂತರಿಸಬೇಕು ಹಾಗೂ ಕಬ್ಬಿನ ದರ, ತೂಕ ಮತ್ತು ಇಳುವರಿಯ (ರಿಕವರಿ) ಪಾರದರ್ಶಕತೆಗಾಗಿ ಆಡಿಟ್ ಟ್ರಯಲ್ ನಡೆಸಬೇಕೆಂದು ಅವರು ಒತ್ತಾಯಿಸಿದರು.
ಇದಲ್ಲದೆ, ಗೋವಾ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ (NH 748A) ಕಾಮಗಾರಿಯಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿದ್ದು, ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ. ಸರಿಯಾದ ಮುನ್ಸೂಚನೆ ಅಥವಾ ನಕ್ಷೆ ಇಲ್ಲದೆ ಕಾಮಗಾರಿ ನಡೆಸುತ್ತಿರುವುದರಿಂದ ಜಮೀನುಗಳಿಗೆ ತೆರಳಲು ಸರ್ವಿಸ್ ರಸ್ತೆಗಳಿಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. 2026-27ನೇ ಸಾಲಿನ ಕಬ್ಬಿಗೆ FRP + SAP + ಎಕ್ಸ್ಫೀಲ್ಡ್ ಮಾದರಿಯಲ್ಲಿ ದರ ಪಾವತಿಸುವುದು ಮತ್ತು ಎಕರೆಗೆ 25,000 ರೂ. ಹಾಗೂ ಹೆಕ್ಟೇರ್ಗೆ 50,000 ರೂ. ಬಾರ ಪರಿಹಾರ ನೀಡಬೇಕೆಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದ್ದು, ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಗಿದೆ.
ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ರಾಹುಲ್ ಶಿಂಧೆ ಅವರು ರೈತರ ಬೇಡಿಕೆಗಳು ಅತ್ಯಂತ ಪ್ರಮುಖವಾಗಿವೆ ಎಂದು ಒಪ್ಪಿಕೊಂಡರು. ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಜೆ ಎಪಿಎಂಸಿ ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ಕರೆಯಲಾಗುವುದು ಎಂದು ತಿಳಿಸಿದ ಅವರು, ಚರ್ಚೆಯಲ್ಲಿ ಭಾಗವಹಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ರೈತ ಮುಖಂಡರಿಗೆ ಆಹ್ವಾನ ನೀಡಿದರು.
