ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕಾದರೆ ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ಹೆಚ್ಚಳ ಮಾಡಬೇಕು. ಕೇಂದ್ರ ಸರ್ಕಾರ ಎಂಎಸ್ಪಿ ಹೆಚ್ಚಿಸಿದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರಿಗೆ ಇನ್ನಷ್ಟು ಹಣ ಪಾವತಿಸಲು ಸಿದ್ಧರಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಕಳೆದ ವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಬೆಳಗಾವಿಗೆ ಬಂದಾಗ ವಿಧಾನಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆಸಲಾಗಿದೆ. ಆದರೆ, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ದರ ನಿಗದಿ ವಿಚಾರದಲ್ಲಿ ಇನ್ನೂ ಗೊಂದಲ ಮುಂದುವರಿದಿದೆ ಎಂದರು.
ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವ ಆರ್ಥಿಕ ಸಾಮರ್ಥ್ಯ ಕಾರ್ಖಾನೆಗಳಿಗೆ ಇರಬೇಕು. ಈ ಸಮಸ್ಯೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳ ಮಾಡುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ . ಕೇಂದ್ರ ಸರ್ಕಾರ ಕೆಲವು ಯೋಜನೆಗಳಿಗೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಂತಹ ಸಂದರ್ಭಗಳಲ್ಲಿ ರಾಜ್ಯ ಸರ್ಕಾರವೇ ಹಣ ಹೊಂದಿಸಿ ಯೋಜನೆಗಳನ್ನು ಮುಂದುವರಿಸಬೇಕಾದ ಪರಿಸ್ಥಿತಿ ಇದೆ. ಕಬ್ಬು ಬೆಳೆಗಾರರ ಸಮಸ್ಯೆಯಲ್ಲಿಯೂ ರಾಜ್ಯ ಸರ್ಕಾರದ ಜತೆಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಪತ್ರಿ ಟನ್ ಕಬ್ಬಿಗೆ 3,500 ರೂ. ನೀಡಲು ಕಾರ್ಖಾನೆಗಳು ಸಿದ್ದ; ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂ. ಪಾವತಿಸಲು ಸಿದ್ದರಿದ್ದಾರೆ. ಆದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇದಕ್ಕಿಂತ ಕಡಿಮೆ ದರ ನೀಡಲಾಗುತ್ತಿದೆ. ರೈತರ ಬೇಡಿಕೆ ಹಾಗೂ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ರೈತರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರತಿ ಹತ್ತು ಕಿಲೋಮೀಟರ್ಗೆ ಒಂದರಂತೆ ತೂಕದ ಯಂತ್ರಗಳ ವ್ಯವಸ್ಥೆಯಿದೆ. ರೈತರು ತಮ್ಮ ಕಬ್ಬನ್ನು ತಾವೇ ತೂಕ ಮಾಡಿಸಿಕೊಂಡು ಕಾರ್ಖಾನೆಗಳಿಗೆ ಪೂರೈಸುವ ಅವಕಾಶವಿದೆ. ಈವರೆಗೆ ತೂಕದಲ್ಲಿ ಮೋಸವಾಗಿರುವ ಕುರಿತು ಯಾವುದೇ ರೈತರು ಅಧಿಕೃತವಾಗಿ ದೂರು ನೀಡಿಲ್ಲ. ಒಂದು ವೇಳೆ ರೈತರು ದೂರು ಸಲ್ಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗುವುದು ಎಂದ ಅವರು, ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಮುಖ್ಯ. ಕಬ್ಬಿನ ದರ ನಿಗದಿ, ಕಾರ್ಖಾನೆಗಳ ಆರ್ಥಿಕ ಸಾಮರ್ಥ್ಯ ಹಾಗೂ ಸಕ್ಕರೆಯ ಮಾರುಕಟ್ಟೆ ಬೆಲೆ ಇವೆಲ್ಲವನ್ನೂ ಪರಿಗಣಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹಾಲು ಉತ್ಪಾದಕರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರ ಕೈಗೊಳ್ಳಲಾಗಿದೆ ರಾಜ್ಯ ಸರ್ಕಾರ ನವೆಂಬರ್ 1ರಿಂದ ಅನ್ವಯವಾಗುವಂತೆ ಹಾಲಿನ ದರದಲ್ಲಿ ಪ್ರತಿ ಲೀಟರ್ಗೆ ₹8 ಹೆಚ್ಚಳ ಮಾಡಿದೆ. ಇದರಲ್ಲಿ ₹7 ನೇರವಾಗಿ ಹಾಲು ಉತ್ಪಾದಕರಿಗೆ ತಲುಪಲಿದ್ದು, ಉಳಿದ ₹1 ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ ಎಂದರು.
