ಬೆಳಗಾವಿ ಮಹಾನಗರ ಪಾಲಿಕೆಗೆ ಲೋಕಾಯುಕ್ತ ಉಪಾಯುಕ್ತ ವೀರಪ್ಪ ಬಿ. ದಿಢೀರ್ ಭೇಟಿ ನೀಡಿದರು. ಸುಸ್ಥಿರ ವಾಹನಗಳ ಲಭ್ಯತೆ, ಕುಡಿಯುವ ನೀರು ಪೂರೈಕೆ, ಬೀದಿ ದೀಪ ನಿರ್ವಹಣೆ ಹಾಗೂ ನಗರದ ನೈರ್ಮಲ್ಯ ಸ್ಥಿತಿಗತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಮಾಂಜಾ ದಾರದಿಂದ ಸಂಭವಿಸಿದ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತರು, ಮಾಂಜಾ ಮಾರಾಟಗಾರರ ವಿರುದ್ಧ ಕೇವಲ ದಾಳಿ ನಡೆಸಿ ಸುಮ್ಮನಾಗದೆ ತಕ್ಷಣವೇ ಎಫ್ಐಆರ್ (FIR) ದಾಖಲಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳಗಾವಿ ಮಹಾನಗರ ಪಾಲಿಕೆಯ ವಿವಿಧ ವಿಭಾಗಗಳಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಉಪಾಯುಕ್ತ ವೀರಪ್ಪ ಬಿ. ಅವರು ಸುಸ್ಥಿರ ವಾಹನಗಳ ಲಭ್ಯತೆ, ಕುಡಿಯುವ ನೀರು ಪೂರೈಕೆ, ಬೀದಿ ದೀಪ ನಿರ್ವಹಣೆ ಹಾಗೂ ನಗರದ ನೈರ್ಮಲ್ಯ ಸ್ಥಿತಿಗತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಇದೇ ವೇಳೆ ಪೌರಕಾರ್ಮಿಕರ ವೇತನ, ಅವರಿಗೆ ತಲುಪಬೇಕಾದ ಸೌಲಭ್ಯಗಳ ವಿತರಣೆ ಮತ್ತು ಫೂಟ್ ಪಾತ್ ಅತಿಕ್ರಮಣದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರ್ವಜನಿಕ ರಸ್ತೆ ಹಾಗೂ ಕಾಲುದಾರಿಗಳನ್ನು ಅತಿಕ್ರಮಿಸಿರುವವರಿಗೆ ತಕ್ಷಣ ನೋಟಿಸ್ ನೀಡಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಉಪಾಯುಕ್ತ ಉದಯಕುಮಾರ್ ತಳವಾರ ಅವರಿಗೆ ಸೂಚಿಸಿದರು.

ನಗರದಲ್ಲಿ ಇತ್ತೀಚೆಗೆ ಪ್ರಾಣಾಂತಿಕ ಮಾಂಜಾ ದಾರದಿಂದ ಸಂಭವಿಸಿದ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತರು, ಮಾಂಜಾ ಮಾರಾಟಗಾರರ ವಿರುದ್ಧ ಕೇವಲ ದಾಳಿ ನಡೆಸಿ ಸುಮ್ಮನಾಗದೆ ತಕ್ಷಣವೇ ಎಫ್ಐಆರ್ (FIR) ದಾಖಲಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತದನಂತರ, ಡಿಸಿ ರೆವೆನ್ಯೂ ಸಿದ್ಧು ಹುಲ್ಲೋಳಿ ಅವರಿಂದ ಎ-ಖಾತಾ, ಬಿ-ಖಾತಾ, ಪಿಐಡಿ ವಿವರಗಳನ್ನು ಪಡೆದ ಅವರು, ಮಹಾನಗರ ಪಾಲಿಕೆಯ ಆಸ್ತಿಗಳೆಷ್ಟು, ಅದರಲ್ಲಿ ಅತಿಕ್ರಮಣಗೊಂಡಿದ್ದೆಷ್ಟು ಹಾಗೂ ಲೀಜ್ಗೆ ನೀಡಲಾದ ಮಳಿಗೆಗಳಿಂದ ಬರಬೇಕಾದ ಕರ ಸಂಗ್ರಹದ ಸಂಪೂರ್ಣ ಲೆಕ್ಕಪತ್ರಗಳನ್ನು ಪರಿಶೀಲಿಸಿದರು.

ತಪಾಸಣೆಯ ವೇಳೆ ಪಾಲಿಕೆ ಸಿಬ್ಬಂದಿಯ ಫೋನ್ ಪೇ (PhonePe) ಖಾತೆಗಳನ್ನು ನೇರವಾಗಿ ಪರಿಶೀಲಿಸಿದ ಲೋಕಾಯುಕ್ತರು, ಅನುಮಾನಾಸ್ಪದವಾಗಿ ಹೆಚ್ಚಿನ ಹಣ ವರ್ಗಾವಣೆಯಾಗಿರುವುದಕ್ಕೆ ತಕ್ಷಣವೇ ಸೂಕ್ತ ಲೆಕ್ಕ ನೀಡುವಂತೆ ಖಡಕ್ ಆಗಿ ನುಡಿದರು. ಕಚೇರಿ ವೇಳೆಯಲ್ಲಿ ಕೆಲಸ ಬಿಟ್ಟು ಚೀಟಿ ಆಟ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಸಿಬ್ಬಂದಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಪಾಲಿಕೆಯಲ್ಲಿ ಪಾರದರ್ಶಕತೆ ಮತ್ತು ಶಿಸ್ತು ಕಾಯ್ದುಕೊಳ್ಳದಿದ್ದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
