ಬೆಳಗಾವಿಯ ಕಣಬರ್ಗಿಯಲ್ಲಿ ಪ್ರಸ್ತಾವಿತ ಐಟಿ ಪಾರ್ಕ್ ಪಕ್ಕದಲ್ಲಿರುವ 110 ಎಕರೆ ಜಮೀನನ್ನು ಬುಡಾ ಅಧ್ಯಕ್ಷರು ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಆಸೀಫ್ (ರಾಜು) ಸೇಠ್ ಅವರು ಇಂದು ಪರಿಶೀಲಿಸಿದರು. ಆರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಬೃಹತ್ ಜಮೀನಿನಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿದರು.
ಬುಡಾ ಅಧಿಕಾರಿಗಳು ಹಾಗೂ ಯುವ ನಾಯಕ ಅಮಾನ್ ಸೇಠ್ ಅವರೊಂದಿಗೆ ಕಣಬರ್ಗಿ ಪ್ರದೇಶಕ್ಕೆ ಶಾಸಕ ಆಸೀಫ್ ಸೇಠ್ ಭೇಟಿ ನೀಡಿ,

ಜಮೀನಿನ ಪ್ರಸ್ತುತ ಸ್ಥಿತಿಗತಿ ಹಾಗೂ ಭವಿಷ್ಯದ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉತ್ತಮ ವಸತಿ ಸೌಲಭ್ಯ ಹಾಗೂ ಸುಧಾರಿತ ಜೀವನಮಟ್ಟ ಕಲ್ಪಿಸುವುದು ತಮ್ಮ ಕನಸಿನ ಯೋಜನೆಯಾಗಿದೆ ಎಂದು ಶಾಸಕರು ತಿಳಿಸಿದರು. ಬುಡಾ ಅಧ್ಯಕ್ಷರಾಗಿ ನಗರದ ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಬೇಕು ಎಂಬುದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಯೋಜನೆಯನ್ನು ಜಾರಿಗೊಳಿಸುವ ಮುನ್ನ ಜಮೀನಿನ ಸೂಕ್ತತೆ, ಅಭಿವೃದ್ಧಿಯ ಸಾಧ್ಯತೆಗಳು ಹಾಗೂ ಅಗತ್ಯವಿರುವ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ಶಾಸಕ ಆಸೀಫ್ ಸೇಠ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಬೆಳಗಾವಿ ನಗರದ ಯೋಜಿತ ಅಭಿವೃದ್ಧಿಯ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೂ ಉತ್ತಮ ಜೀವನಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶಾಸಕರ ಈ ಕ್ರಮವು ಮಹತ್ವದ ಹೆಜ್ಜೆಯಾಗಿ ಹೊರಹೊಮ್ಮಿದೆ.

