ಬೆಳಗಾವಿಯ ಸ್ವಾಮೀ ಛಾಯಾ ಪ್ರತಿಷ್ಠಾನದಿಂದ ಸಂಚಾಲಿತ ‘ಘರಕುಲ್’ ವೃದ್ಧಾಶ್ರಮವು ತನ್ನ ೨೫ ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿದ್ದು, ಮುಂಬರುವ ನವೆಂಬರ್ ೩ ರಂದು ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಎಂದು ಅನೀಲ್ ಪೋತದಾರ್ ಅವರು ತಿಳಿಸಿದರು.
ಇಂದು ಬೆಳಗಾವಿಯಲ್ಲಿ ಕರೆಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೇ ೧, 2001ರಲ್ಲಿ ಸಂಸ್ಥಾಪಕರಾದ ಶ್ರೀ ಮುಕುಂದರಾವ್ ಪೋತದಾರ್ ಅವರು ನರಗುಂದಕರ್ ವಾಡಾದ ಸಣ್ಣ ಕೊಠಡಿಯಲ್ಲಿ ಈ ಆಶ್ರಮವನ್ನು ಪ್ರಾರಂಭಿಸಿದ್ದರು. ಹಿರಿಯರ ಸಂಖ್ಯೆ ಹೆಚ್ಚಾದಂತೆ ಕ್ಯಾಂಪ್ ಪ್ರದೇಶದ ಬಂಗ್ಲೆಗೆ ಹಾಗೂ ನಂತರ ಬೆನಕನಹಳ್ಳಿ ಬಳಿ ಸುಮಾರು ಒಂದು ಎಕರೆ ಜಾಗದಲ್ಲಿ ಸುಂದರ ಕಟ್ಟಡ ಮತ್ತು ದೇಗುಲದೊಂದಿಗೆ ಬೃಹತ್ ಆಶ್ರಮವಾಗಿ ಇದು ಬೆಳೆದುನಿಂತಿದೆ. ಸಂಪೂರ್ಣ ಸೇವಾ ಮನೋಭಾವದಿಂದ ನಡೆಯುತ್ತಿರುವ ಈ ಸಂಸ್ಥೆಯ ಜವಾಬ್ದಾರಿಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ರಾಜೀವ್ ಪೋತದಾರ ಅವರು ಅಧ್ಯಕ್ಷರಾಗಿ ವಹಿಸಿಕೊಂಡಿದ್ದಾರೆ.
ನವೆಂಬರ್ ೩ ರಂದು ನಡೆಯಲಿರುವ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಕೈಗಾರಿಕೋದ್ಯಮಿ ಸಬ್ನಿಸ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಆಶ್ರಮಕ್ಕೆ ದೇಣಿಗೆ ನೀಡುವ ದಾನಿಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ 12A, SR ಮತ್ತು 80G ತೆರಿಗೆ ವಿನಾಯಿತಿ ಸೌಲಭ್ಯಗಳಿದ್ದು, ಸಾರ್ವಜನಿಕರು ಈ ಸತ್ಕಾರ್ಯಕ್ಕೆ ಮುಕ್ತವಾಗಿ ಸಹಕರಿಸಬೇಕೆಂದರು.
