Belagavi

ವಿಜಯಾದಶಮಿ ಹಿನ್ನೆಲೆ ಬೆಳಗಾವಿಯಲ್ಲಿ ಆರ್.ಎಸ್.ಎಸ್. ಪಥಸಂಚಲನ…

Share

ವಿಜಯಾದಶಮಿಯ ಹಿನ್ನೆಲೆ ಬೆಳಗಾವಿ ನಗರದಲ್ಲಿ ಇಂದು ಆರ್.ಎಸ್.ಎಸ್. ಸ್ವಯಂಸೇವಕರು ಭಾಗವಹಿಸಿದ ಭವ್ಯ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ನೆರವೇರಿದೆ.

ವಿಜಯಾದಶಮಿಯ ಹಿನ್ನೆಲೆ ಪ್ರತಿವರ್ಷದ ಸಾಂಪ್ರದಾಯಿಕ ವೈಭವದಂತೆ ಈ ಬಾರಿಯೂ ಬೆಳಗಾವಿಯ ಸರ್ಕಾರಿ ಸರದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ಸಾವಿರಾರು ಗಣವೇಷಧಾರಿಗಳು ಸಮಾವೇಶಗೊಂಡಿದ್ದರು. ಮೈದಾನದಿಂದ ಶಿಸ್ತುಬದ್ಧವಾಗಿ ಆರಂಭವಾದ ಪಥಸಂಚಲನವು ಕಾಲೇಜು ರಸ್ತೆ, ರಾಣಿ ಚನ್ನಮ್ಮ ವೃತ್ತ, ಶನಿವಾರಖೂಟ್‌ ಹಾಗೂ ಕಾಕತಿವೇಸ್ ಮಾರ್ಗವಾಗಿ ವೈಭವದಿಂದ ಮುನ್ನಡೆಯಿತು. ದಾರಿಯುದ್ದಕ್ಕೂ ಗಣವೇಷಧಾರಿಗಳ ಹೆಜ್ಜೆಯ ಸದ್ದು ನಗರದ ಜನರಲ್ಲಿ ಜಾಗೃತಿ ಮತ್ತು ದೇಶಭಕ್ತಿಯ ಸಂಚಲನ ಮೂಡಿಸಿತು.

ಪಥಸಂಚಲನದ ಮುಂಭಾಗದಲ್ಲಿದ್ದ ಜೀಪಿನಲ್ಲಿ ಆರ್.ಎಸ್.ಎಸ್. ಸಂಸ್ಥಾಪಕ ಡಾ. ಕೇಶವ್ ಬಳಿರಾಮ್ ಹೆಡಗೆವಾರ್ ಮತ್ತು ಮಾಧವ್ ಸದಾಶಿವ ಗೋಲವಲಕರ್ ಅವರ ಭಾವಚಿತ್ರಗಳನ್ನು ಅಲಂಕರಿಸಿ ಒಯ್ಯಲಾಯಿತು. ಬಾಂಡ್ ನಿನಾದಕ್ಕೆ ತಕ್ಕಂತೆ ಶಿಸ್ತಿನಿಂದ ಸಾಗುತ್ತಿದ್ದ ಸ್ವಯಂಸೇವಕರಿಗೆ ದಾರಿಯುದ್ದಕ್ಕೂ ಸಾರ್ವಜನಿಕರು ಹೂವಿನ ಮಳೆಗರೆದು ಗೌರವ ಸಮರ್ಪಿಸಿದರು. ಇದೇ ವೇಳೆ, ವಿವಿಧ ಮಹಾನ್ ನಾಯಕರ ವೇಷಭೂಷಣ ತೊಟ್ಟಿದ್ದ ಪುಟಾಣಿ ಮಕ್ಕಳು ನೆರೆದಿದ್ದ ಸಾರ್ವಜನಿಕರ ಕಣ್ಣು ಮತ್ತು ಮನಸ್ಸನ್ನು ಸೆಳೆದರು.

ಈ ಪಥಸಂಚಲನವು ಗಣಪತ್ ಗಲ್ಲಿ, ನರಗುಂದಕರ ಭಾವೆ ಚೌಕ, ಶನಿಮಂದಿರ, ಕುಲಕರ್ಣಿ ಗಲ್ಲಿ, ಟಿಳಕ ಚೌಕ, ರಾಮಲಿಂಗಖಿಂಡ ಗಲ್ಲಿ ಹಾಗೂ ಧರ್ಮವೀರ ಸಂಭಾಜಿ ವೃತ್ತದ ಮಾರ್ಗವಾಗಿ ಸಾಗಿ ಕೊನೆಗೆ ಲಿಂಗರಾಜ ಕಾಲೇಜು ಮೈದಾನವನ್ನು ತಲುಪಿತು. ಪಥಸಂಚಲನದ ವೇಳೆ ತುರ್ತು ಪರಿಸ್ಥಿತಿಯಲ್ಲಿದ್ದ ಅಂಬ್ಯುಲೆನ್ಸ್’ಗೆ ದಾರಿ ಮಾಡಿಕೊಡಲಾಯಿತು.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬೆಳಗಾವಿ ಪೊಲೀಸ್ ಇಲಾಖೆಯಿಂದ ಮಾರ್ಗದುದ್ದಕ್ಕೂ ಅತ್ಯಂತ ಖಡಕ್ ಬಂದೋಬಸ್ತ್ ಹಾಗೂ ಭದ್ರತೆಯನ್ನು ಒದಗಿಸಲಾಗಿತ್ತು.

Tags:

error: Content is protected !!