ಹುಬ್ಬಳ್ಳಿ ನಗರಕ್ಕೆ ಅಪಾಯಕಾರಿ ಮಾಂಜಾ ದಾರದ ಕಂಟಕ ಬೆಂಬಿಡದಂತಾಗಿದೆ. ಮಾಂಜಾ ದಾರಕ್ಕೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಇದೀಗ ಉಣಕಲ್ನಲ್ಲಿ ಮತ್ತೊಬ್ಬ ಯುವಕ ಮಾಂಜಾ ದಾರದಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆತಂಕ ಮೂಡಿಸಿದೆ.
ನಿನ್ನೆ ಸಂಜೆ ಉಣಕಲ್ನಲ್ಲಿ ಯುವಕನ ಮುಖಕ್ಕೆ ಮಾಂಜಾ ದಾರ ಸಿಲುಕಿ ಮೂಗು ಹಾಗೂ ಕಣ್ಣಿನ ಭಾಗಕ್ಕೆ ಗಾಯಗಳಾಗಿವೆ ಎನ್ನಲಾಗಿದೆ. ಗಾಯಗೊಂಡ ಯುವಕನನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಣ್ಣು ಮತ್ತು ಮೂಗಿನ ಭಾಗಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಒಂದೆಡೆ ಮಹಿಳೆಯ ಸಾವು, ಮತ್ತೊಂದೆಡೆ ಯುವಕನಿಗೆ ಗಂಭೀರ ಗಾಯ! ಗಾಳಿಪಟದ ಸಂಭ್ರಮದ ಹೆಸರಿನಲ್ಲಿ ಅಪಾಯಕಾರಿ ಮಾಂಜಾ ದಾರ ಅಮಾಯಕರ ಜೀವಕ್ಕೆ ಕಂಟಕವಾಗುತ್ತಿದೆ. ನಿಷೇಧ ಮತ್ತು ಎಚ್ಚರಿಕೆಗಳ ನಡುವೆಯೂ ಇಂತಹ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
