ಪೊಲೀಸರು ಶ್ರೀಕೃಷ್ಣ ಪರಮಾತ್ಮನ ವಂಶಕ್ಕೆ ಸೇರಿದವರು, ನಿಮ್ಮ ರಕ್ಷಣೆ ನಮ್ಮನ್ನು ಕಾಪಾಡುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಮೈಸೂರು ರಸ್ತೆ CAR ಗ್ರೌಂಡ್ನಲ್ಲಿರೋ ಹುತಾತ್ಮರ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್, ಗೃಹಮಂತ್ರಿ ಪ್ರಿಯಾಂಕ್ ಖರ್ಗೆ, ಡಿಜಿಪಿ ಡಾ.ಸಲೀಂ ಭಾಗಿಯಾದರು. ಈ ವೇಳೆ ಕಳೆದ ಒಂದು ವರ್ಷದಲ್ಲಿ ಹುತಾತ್ಮರಾದ ಕರ್ನಾಟಕದ 6 ಜನ ಸೇರಿ ದೇಶಾದ್ಯಂತ 155 ಪೊಲೀಸ್ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಮ್ಮೆಲ್ಲರಿಗೋಸ್ಕರ ಬದುಕನ್ನ ಮುಡಿಪಾಗಿಟ್ಟವರಿಗೆ ಕೃತಜ್ಞತೆ ಸಲ್ಲಿಸಲಾಗ್ತಿದೆ. ಅಂದು ಚೀನಾದ ದಾಳಿಗೆ 10 ಜನ ಪೊಲೀಸ್ ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಅಂದಿನಿಂದ ಈ ಪರಂಪರೆಯನ್ನ ಮುಂದುವರೆಸಿಕೊಂಡು ಬಂದಿದ್ದೇವೆ. ಎಲ್ಲಾ ಸಿಬ್ಬಂದಿಗಳು ಕುಟುಂಬದವರಿಗೆ ಸರ್ಕಾರದ ಪರವಾಗಿ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.

ಎಲ್ಲಾ ಹುತಾತ್ಮರ ಕುಟುಂಬದ ಜೊತೆಗೆ ನಮ್ಮ ಸರ್ಕಾರ ಇದ್ದೇ ಇರುತ್ತದೆ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ದೇಶದ ಪೊಲೀಸರಿಗೆ ಗೌರವವನ್ನು ತಂದಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ನಾನು ಆಗಾಗ ಹೇಳ್ತೇನೆ, ನೀವೆಲ್ಲಾ ಶ್ರೀಕೃಷ್ಣ ಪರಮಾತ್ಮನ ವಂಶಕ್ಕೆ ಸೇರದವರು. ಸಮಾಜದಲ್ಲಿ ಸುವ್ಯವಸ್ಥೆ ಹದಗೆಟ್ಟಾಗ ನಿಮ್ಮ ರಕ್ಷಣೆ ಎಲ್ಲರನ್ನ ಕಾಪಾಡುತ್ತದೆ ಎಂದು ಹೇಳಿದರು.

ಇನ್ನು, ಖಾಲಿ ಇರುವ 7900 ಕ್ಕೂ ಅಧಿಕ ಹುದ್ದೆಗಳನ್ನ ಭರ್ತಿ ಮಾಡಲು ಕ್ರಮ ವಹಿಸ್ತೇವೆ ಎಂದು ಹೇಳಿದ ಸಿಎಂ, ಪೊಲೀಸರ ವಸತಿಗೂ ಅನೇಕ ಕಾರ್ಯಕ್ರಮ ರೂಪಿಸಿ ಹಣ ಒದಗಿಸಲು ಬದ್ಧರಾಗಿದ್ದೇವೆ. ಹೊಸ ವಾಹನಗಳು, ತಂತ್ರಜ್ಞಾನದ ವ್ಯವಸ್ಥೆಗೆ ಅನುದಾನವನ್ನ ಒದಗಿಸಿದ್ದೇವೆ. ಪ್ರಭಾವಿಗಳು ಜನಸಾಮಾನ್ಯರು ಎಲ್ಲರನ್ನೂ ಒಂದೇ ರೀತಿ ಕಾಣುವುದಕ್ಕೆ ಬದ್ಧರಾಗಿರಿ ಎಂದು ಹೇಳಿದರು.
