ಕಿತ್ತೂರು ಉತ್ಸವದ ಹೊತ್ತಿನಲ್ಲೇ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮನ ಪುತ್ಥಳಿಯ ಖಡ್ಗ ಹಿಡಿದಿರುವ ಕೈ ಭಾಗ ಕಟ್ ಆಗಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶ ಹಾಗೂ ಆಘಾತಕ್ಕೆ ಕಾರಣವಾಗಿದೆ.
ಬೆಳಗಾವಿ: ಕಿತ್ತೂರು ಉತ್ಸವದ ಸಂಭ್ರಮದ ನಡುವೆಯೇ ವೀರರಾಣಿ ಕಿತ್ತೂರು ಚೆನ್ನಮ್ಮನ ಪುತ್ಥಳಿಗೆ ಹಾನಿಯಾಗಿರುವ ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಿಫ್ಟ್ ಮೂಲಕ ಮೂರ್ತಿಯ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರ ಅಚಾತುರ್ಯದಿಂದ ಚೆನ್ನಮ್ಮನ ಖಡ್ಗ ಹಿಡಿದಿದ್ದ ಕೈ ಕಟ್ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ತಾಲೂಕು ಆಡಳಿತವು ತಕ್ಷಣವೇ ಮೂರ್ತಿಯನ್ನು ಕೇಸರಿ ಬಟ್ಟೆಯಿಂದ ಮುಚ್ಚಿದ್ದು, ಬೈಲಹೊಂಗಲ ಡಿಎಸ್ಪಿ ವೀರಯ್ಯ ಹಿರೇಮಠ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಿತ್ತೂರು ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಹಾನಿಗೊಳಗಾದ ಚೆನ್ನಮ್ಮನ ಖಡ್ಗದ ಕೈ ಭಾಗವನ್ನು ಸರಿಪಡಿಸುವ ಕಾರ್ಯ ಶರವೇಗದಲ್ಲಿ ಸಾಗಿದೆ.
