Belagavi

ರಾಹುಲ್ ಗಾಂಧಿ ಬಂಧನ ಖಂಡಿಸಿ ಬೆಳಗಾವಿಯಲ್ಲಿ ಯುವ ಕಾಂಗ್ರೆಸ್ಸಿನಿಂದ ಪ್ರತಿಭಟನೆ

Share

ನಮಸ್ಕಾರ, ಬೆಳಗಾವಿಯಲ್ಲಿ ಇಂದು ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಫಾರ್ಮ್ 7 ರ ದುರುಪಯೋಗ ಹಾಗೂ ಮತದಾರರ ಪಟ್ಟಿಯಿಂದ ಅಕ್ರಮ ಹೆಸರುಗಳ ತೆಗೆದುಹಾಕುವಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಪಟ್ಟು ಹಿಡಿದರು.

ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಂಗ್ರೆಸ್ ಭವನದಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ದೆಹಲಿಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ನಡೆದ ಆಂದೋಲನಕ್ಕೆ ಸಂಪೂರ್ಣ ಬೆಂಬಲ ಸೂಚಿಸಲಾಯಿತು. ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರು ಪ್ರತಿಭಟನಾಕಾರರೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಮುಖಂಡರು ತೀವ್ರವಾಗಿ ಖಂಡಿಸಿದರು. ದೆಹಲಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಕೇಂದ್ರ ಸರ್ಕಾರದ ನೀತಿಗಳು ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಇಡೀ ದೇಶದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ಮತ್ತು ಫಾರ್ಮ್ 7 ಅನ್ನು ಅಸಮರ್ಪಕವಾಗಿ ಬಳಸಿಕೊಂಡು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಮತಗಳನ್ನು ಅಳಿಸುವ ದೊಡ್ಡ ಮಟ್ಟದ ಷಡ್ಯಂತ್ರ ನಡೆಯುತ್ತಿದೆ ಎಂದು ಯುವ ಕಾಂಗ್ರೆಸ್ ಮುಖಂಡ ರಾಹುಲ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು. ರಾಷ್ಟ್ರವ್ಯಾಪಿ 13 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದ್ದು, ಕೇವಲ ಕರ್ನಾಟಕದಲ್ಲೇ 1 ಕೋಟಿಗೂ ಹೆಚ್ಚು ಮತದಾರರು ವಂಚಿತರಾಗಿದ್ದಾರೆ ಎಂದು ದೂರಲಾಯಿತು. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪ್ರಭಾವವಿರುವ ಬೂತ್‌ಗಳು, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು ಹಾಗೂ ಒಬಿಸಿ ವರ್ಗದ ಮತದಾರರನ್ನು ಗುರಿಯಾಗಿಸಿಕೊಂಡು ಮತಗಳನ್ನು ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ ಎಂದು ಆರೋಪಿಸಲಾಯಿತು.

ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸದೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದ ಮುಖಂಡರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇಡಿ, ಸಿಬಿಐ ಸಾಲಿಗೆ ಈಗ ಚುನಾವಣಾ ಆಯೋಗವೂ ಸೇರ್ಪಡೆಗೊಂಡಿದ್ದು, ರಾಷ್ಟ್ರಪತಿಯವರು ಕೂಡಲೇ ಮಧ್ಯಪ್ರವೇಶಿಸಿ ಆಯುಕ್ತರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಈಗಾಗಲೇ ಫಾರ್ಮ್ 7 ದುರುಪಯೋಗಪಡಿಸಿಕೊಂಡ ಕೆಲವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ಧರು.

Tags:

error: Content is protected !!