ಸಮಸ್ತ ಆಪ್ ಮೂಲಕ ಹೆಚ್ಚುತ್ತಿರುವ ಕೆಲಸದೊತ್ತಡ, ಡೇಟಾ ಭತ್ಯೆ ಕಡಿತ ಹಾಗೂ ವೇತನ ಪಾವತಿಯಲ್ಲಿ ಆಗುತ್ತಿರುವ ಗೊಂದಲಗಳನ್ನು ಖಂಡಿಸಿ ಬೆಳಗಾವಿಯಲ್ಲಿಂದು ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೂ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿದರು.
ಸ್ಥಿರ ವೇತನ ಹೆಚ್ಚಳ, ಆನ್‌ಲೈನ್ ಆಪ್‌ಗಳ ಮೂಲಕ ಹೆಚ್ಚುವರಿ ಕೆಲಸದೊತ್ತಡ ಹಾಗೂ ಆರ್.ಸಿ.ಎಚ್. ಪೋರ್ಟಲ್ ಪಾವತಿ ಸಮಸ್ಯೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಮುಂಚೆ ನೀಡುತ್ತಿದ್ದ 250 ರೂ. ಡೇಟಾ ಭತ್ಯೆಯನ್ನು ಕಡಿತಗೊಳಿಸಿ ಈಗ ಸಿಬ್ಬಂದಿಯ ಮೇಲೆಯೇ ಒತ್ತಡ ಹೇರಲಾಗುತ್ತಿದೆ. ಮತ್ತು ಆನ್‌ಲೈನ್‌ನಲ್ಲಿ ಸರ್ವೆ, ಇಮ್ಯುನೈಸೇಶನ್ ಸೇರಿದಂತೆ ವಿವಿಧ ಪ್ರೋಗ್ರಾಂಗಳ ಎಂಟ್ರಿ ಮಾಡಿದ್ದರೂ ಅದಕ್ಕೆ ತಕ್ಕಂತೆ ಪೇಮೆಂಟ್ ಬಾರದೆ ಇರುವುದರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಗೀತಾ ರಾಯಗೋಳ್ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲದಲ್ಲಿ ₹೧೦,೦೦೦ ಸ್ಥಿರ ವೇತನ ನೀಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಜಾರಿಗೆ ಬಂದಿಲ್ಲವೆಂದು, ಮತ್ತು ಸಮಸ್ತ (SAMAST) ಆಪ್ ಮೂಲಕ ಬರುತ್ತಿರುವ ವೇತನ ಸರಿಯಾದ ಸಮಯಕ್ಕೆ ಸಿಗದೆ, ನಾಲ್ಕು ವಿಧದಲ್ಲಿ ಗೊಂದಲಮಯವಾಗಿ ಜಮೆ ಆಗುತ್ತಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯಾದ್ಯಂತ ಸುಮಾರು ೧,೦೦೦ ರಿಂದ ೨,೦೦೦ ಸಿಬ್ಬಂದಿ ಒಗ್ಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಥಣಿ ತಾಲೂಕಿನ ಮದಭಾವಿಯ ಸುರೇಖಾ ವಿಜಯ ಕಾಂಬಳೆ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಅಕ್ಟೋಬರ್ 5 ರಿಂದ 11 ರವರೆಗೆ ಪ್ರತಿಭಟನಾ ಸಪ್ತಹವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖವಾಗಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ. ನಿಶ್ಚಿತ ಗೌರವಧನ (ಫಿಕ್ಸ್ ಪೇಮೆಂಟ್) ನೀಡಬೇಕು ಹಾಗೂ ಹಿಂದೆ ಬೆಂಗಳೂರಿನಲ್ಲಿ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಲಾಗಿದೆ. ಇದರೊಂದಿಗೆ, ಯಾವುದೇ ಸೂಕ್ತ ಮೊಬೈಲ್, ಸರಿಯಾದ ಡೇಟಾ ಅಥವಾ ತರಬೇತಿ ನೀಡದೆ ‘ಸಮಸ್ತ’ (SAMAST) ಆಪ್ ಮೂಲಕ ಆನ್‌ಲೈನ್ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವುದನ್ನು ವಿರೋಧಿಸಿದ್ದು, ಮೂರು-ನಾಲ್ಕು ತಿಂಗಳು ಕಳೆದರೂ ಸರಿಯಾಗಿ ಜಮೆಆಗದೆ ಗೊಂದಲಮಯವಾಗಿರುವ ಪೇಮೆಂಟ್ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ ರಾಲಿಯನ್ನು ಸಂಘಟಿಸಲಾಗಿದೆ ಎಂದು ಆಶಾ ಸಂಘದ ಪ್ರಮುಖರಾದ ಕೆ.ಸೋಮಶೇಖರ್ ಯಾದಗಿರಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಭಾಗಿಯಾಗಿದ್ಧರು.
