ವಿಜಯಪುರ ಜಿಲ್ಲೆಯಲ್ಲಿ ಬರದ ಹೊಡೆತಕ್ಕೆ ಸಿಲುಕಿರುವ ದ್ರಾಕ್ಷಿ ಬೆಳೆಗಾರರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕೋಲ್ಡ್ ಸ್ಟೋರೇಜ್ನಲ್ಲಿ ಸಂಗ್ರಹಿಸಿದ್ದ ಒಣದ್ರಾಕ್ಷಿಯನ್ನೇ ರೈತರಿಗೆ ತಿಳಿಯದಂತೆ ಮಾರಾಟ ಮಾಡಿ ಹಣ ನೀಡದೆ ವಂಚಿಸಿರುವ ಆರೋಪ ಕೇಳಿಬಂದಿದೆ. ಕಡಿಮೆ ಬಾಡಿಗೆ ಹಾಗೂ ಉತ್ತಮ ಬೆಲೆಯ ಆಮಿಷವೊಡ್ಡಿ ರೈತರಿಂದ ಒಣದ್ರಾಕ್ಷಿ ಪಡೆದಿದ್ದ ಕೋಲ್ಡ್ ಸ್ಟೋರೇಜ್ ಮಾಲೀಕ ಇದೀಗ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ರೈತರು ಹಣಕ್ಕಾಗಿ ಕಂಗಾಲಾಗಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ವಿಜಯಪುರ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದರ ನಡುವೆಯೇ ಮನಗೂಳಿ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ತಮ್ಮ ಒಣದ್ರಾಕ್ಷಿಯನ್ನು ಮುಳವಾಡದಲ್ಲಿರುವ ಭೂಮಿಕಾ ಕೋಲ್ಡ್ ಸ್ಟೋರೇಜ್ನಲ್ಲಿ ಸಂಗ್ರಹಿಸಿದ್ದರು. ಈ ವೇಳೆ ಕೋಲ್ಡ್ ಸ್ಟೋರೇಜ್ ಮಾಲೀಕ ನಾತು ರಾಠೋಡ್, ಕಡಿಮೆ ಬಾಡಿಗೆ ಹಾಗೂ ಒಣದ್ರಾಕ್ಷಿಗೆ ಉತ್ತಮ ಬೆಲೆ ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದ್ದ ಎನ್ನಲಾಗಿದೆ. ಇದನ್ನು ನಂಬಿದ ರೈತರು ಒಟ್ಟು 970 ಬಾಕ್ಸ್ ಒಣದ್ರಾಕ್ಷಿಯನ್ನು ಕೋಲ್ಡ್ ಸ್ಟೋರೇಜ್ನಲ್ಲಿ ಇರಿಸಿದ್ದರು. ಆದರೆ ರೈತರ ಗಮನಕ್ಕೆ ತಾರದೆ ಒಣದ್ರಾಕ್ಷಿಯನ್ನು ಕೆಜಿಗೆ 530 ರೂಪಾಯಿಯಂತೆ ಸುಮಾರು 29 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾರಾಟ ದಿಂದ ಬಂದ ಹಣದಲ್ಲಿ ಕೇವಲ ಎರಡು ಲಕ್ಷ ರೂಪಾಯಿಯನ್ನು ರೈತರಿಗೆ ನೀಡಿ, ಉಳಿದ ಹಣವನ್ನು ನೀಡದೆ ವಂಚಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಸುಮಾರು 9 ಲಕ್ಷ ರೂಪಾಯಿ ಸ್ಟೋರೇಜ್ ಬಾಡಿಗೆ ಕಡಿತ ಮಾಡಿದ ಬಳಿಕವೂ ಸುಮಾರು 20 ಲಕ್ಷ ರೂಪಾಯಿ ರೈತರಿಗೆ ಬರಬೇಕಿತ್ತು ಎನ್ನಲಾಗಿದೆ.
ಹಣ ನೀಡುವಂತೆ ರೈತರು ಒತ್ತಾಯಿಸಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾದ ಬಳಿಕ ಆರೋಪಿ ಐದು ಲಕ್ಷ ರೂಪಾಯಿ ನೀಡಿ, ಉಳಿದ ಹಣ ನೀಡದೆ ಪರಾರಿಯಾಗಿದ್ದಾನೆ ಎಂದು ರೈತರು ಆರೋಪಿಸಿದ್ದಾರೆ.
ಇದು ಕೇವಲ ಕೆಲವೇ ರೈತರ ಸಮಸ್ಯೆಯಲ್ಲ. ಇದೇ ರೀತಿಯಲ್ಲಿ ಇನ್ನೂ ಹಲವು ರೈತರಿಗೆ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪವೂ ನಾತು ರಾಠೋಡ್ ವಿರುದ್ಧ ಕೇಳಿಬಂದಿದೆ. ಸದ್ಯ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಸಾಲ ಮಾಡಿ, ಮನೆ ಒತ್ತೆಯಿಟ್ಟು ದ್ರಾಕ್ಷಿ ಬೆಳೆದ ರೈತರು ಇದೀಗ ತಮ್ಮ ಹಣಕ್ಕಾಗಿ ಕಣ್ಣೀರಿಡುವಂತಾಗಿದೆ.
ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ರೈತರ ಆತಂಕ ಮತ್ತಷ್ಟು ಹೆಚ್ಚಾಗಿದೆ. ತಮ್ಮ ಹಣವನ್ನು ವಾಪಸ್ ಕೊಡಿಸಿ ನ್ಯಾಯ ಒದಗಿಸಬೇಕು ಎಂದು ರೈತರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಒಟ್ಟಾರೆ, ಒಂದೆಡೆ ಬರದ ಹೊಡೆತ… ಮತ್ತೊಂದೆಡೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಸಂಕಷ್ಟ… ಇದರ ನಡುವೆ ಕೋಲ್ಡ್ ಸ್ಟೋರೇಜ್ನಲ್ಲಿ ಸುರಕ್ಷಿತವಾಗಿರಿಸಿದ್ದ ಒಣದ್ರಾಕ್ಷಿಯ ಹಣವೂ ಸಿಗದೆ ರೈತರು ಕಂಗಾಲಾಗಿದ್ದಾರೆ.
ರೈತರ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪರಾರಿಯಾಗಿರುವ ಆರೋಪಿಯನ್ನು ಪತ್ತೆಹಚ್ಚಿ, ರೈತರ ಹಣ ವಾಪಸ್ ಕೊಡಿಸುವಂತೆ ರೈತರು ಆಗ್ರಹಿಸಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ
