ನಡುಗನ್ನಡ ಸಾಹಿತ್ಯದ ವೈಚಾರಿಕ ನೆಲೆಗಳು ಮುಂದಿನ ಸಾಹಿತ್ಯಕ್ಕೆ ದಾರಿದೀಪವಾಗಿದ್ದು, ಸಮಾನತೆ, ಮಾನವೀಯತೆ ಮತ್ತು ಬದುಕಿನ ವಿವೇಕದ ಸಂದೇಶವನ್ನು ಸಾರಿವೆ ಎಂದು ರಾಣಿ ಪಾರ್ವತಿ ದೇವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಚ್. ಬಿ. ಕೋಲ್ಕಾರ ಅಭಿಪ್ರಾಯಪಟ್ಟರು.


ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ನಡುಗನ್ನಡ ಸಾಹಿತ್ಯ–ವೈಚಾರಿಕ ನೆಲೆಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ನಡುಗನ್ನಡ ಸಾಹಿತ್ಯದ ವೈಚಾರಿಕ ವೈಶಿಷ್ಟ್ಯಗಳನ್ನು ವಿಶ್ಲೇಷಿಸಿದರು.
ಹಳಗನ್ನಡ ಸಾಹಿತ್ಯದಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಎಂಬ ಎರಡು ಕವಲುಗಳು ಪ್ರಧಾನವಾಗಿದ್ದರೆ, ನಡುಗನ್ನಡ ಸಾಹಿತ್ಯವು ಲೌಕಿಕ ಮತ್ತು ಪಾರಮಾರ್ಥಿಕ ಎರಡೂ ಒಂದೇ ಎಂಬ ಜೀವನದರ್ಶನವನ್ನು ಪ್ರತಿಪಾದಿಸಿತು. ಈ ಚಿಂತನೆ ಸಾಹಿತ್ಯದಲ್ಲಿ ಹೊಸ ರೂಪವನ್ನು ಪಡೆದುಕೊಂಡಿತು.
ಹರಿಹರರು ಹೆಣ್ಣನ್ನು ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡುವ ಮೂಲಕ ಸಾಹಿತ್ಯದ ಪರಂಪರೆಗೆ ಹೊಸ ಆಯಾಮ ನೀಡಿದರು. ಜನಸಾಮಾನ್ಯರ ಸರಳ ಬದುಕಿನಲ್ಲಿಯೂ ಶ್ರೇಷ್ಠತೆಯಿದೆ ಎಂಬುದನ್ನು ರಗಳೆಗಳ ಮೂಲಕ ಪ್ರತಿಪಾದಿಸಿದ ಅವರು, ಭಕ್ತಿ ಎಂಬುದು ಕೇವಲ ಆಡಂಬರದ ವಸ್ತುಗಳಲ್ಲಿ ಇಲ್ಲ; ಅದು ಸರಳ ಬದುಕಿನ ಸತ್ಯಾನುಭವದಲ್ಲಿದೆ ಎಂಬುದನ್ನು ಎತ್ತಿಹಿಡಿದನು.
ವಚನ ಸಾಹಿತ್ಯದಿಂದ ಆರಂಭಗೊಂಡ ಸಾಮಾಜಿಕ ಜಾಗೃತಿ ಹಾಗೂ ವೈಚಾರಿಕ ಪರಂಪರೆ ರಗಳೆ, ಷಟ್ಪದಿ, ದಾಸ ಸಾಹಿತ್ಯ, ಸಾಂಗತ್ಯ, ತತ್ವಪದ ಮೊದಲಾದ ಸಾಹಿತ್ಯ ಪ್ರಕಾರಗಳ ಮೂಲಕ ಮತ್ತಷ್ಟು ವಿಸ್ತಾರಗೊಂಡಿತು. ನಡುಗನ್ನಡ ಸಾಹಿತ್ಯದ ಈ ವೈಚಾರಿಕ ಪ್ರಜ್ಞೆಯ ಪ್ರತಿಬಿಂಬವನ್ನು ಹೊಸಗನ್ನಡ ಸಾಹಿತ್ಯದಲ್ಲಿಯೂ ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಉಪಪ್ರಾಚಾರ್ಯ ಪ್ರೊ. ಅರ್ಜುನ ಜಂಬಗಿ ಅವರು, ಭಾಷೆ ಬದುಕಿನ ಅವಿಭಾಜ್ಯ ಅಂಗ. ಪ್ರತಿ ಸಾಹಿತ್ಯದಲ್ಲಿಯೂ ಆಯಾ ಕಾಲ ಘಟ್ಟದ ಜನರ ಬದುಕಿನ ಚಿತ್ರಣವಿದೆ. ಸಾಹಿತ್ಯವು ಸಮಾಜದ ಚಿಂತನೆ ಮತ್ತು ಬದುಕಿನ ಮೌಲ್ಯಗಳನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ಇಂಥ ಸಾಹಿತ್ಯದ ಅಧ್ಯಯನವು ಸಾಮಾಜಿಕ ಪ್ರಜ್ಞೆ ಮತ್ತು ವೈಚಾರಿಕ ದೃಷ್ಟಿಕೋನವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ವೈಚಾರಿಕ ಕೃತಿಗಳನ್ನು ಹೆಚ್ಚು ಹೆಚ್ಚು ಓದುವುದರಿಂದ ಅವರ ಆಲೋಚನ ಕ್ರಮ ವಿಸ್ತರಿಸುತ್ತದೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪಿ. ನಾಗರಾಜ ಅವರು ನಡುಗನ್ನಡ ಸಾಹಿತ್ಯವು ಕೇವಲ ಗತಕಾಲದ ಸಾಹಿತ್ಯ ಪರಂಪರೆಯಲ್ಲ; ಅದು ವರ್ತಮಾನವನ್ನು ಪ್ರಶ್ನಿಸಿ, ಭವಿಷ್ಯವನ್ನು ರೂಪಿಸುವ ವೈಚಾರಿಕ ಬೆಳಕಿನ ಸಾಹಿತ್ಯವಾಗಿದೆ ಎಂದರು.
ವಿದ್ಯಾರ್ಥಿನಿಯರಾದ ಸುಮತಿ ಪೂಜಾರಿ ಹಾಗೂ ಭಾವನಾ ಬುದಲಿ ಪ್ರಾರ್ಥಿಸಿದರು. ಡಾ. ವಾಯ್. ಎ. ಜಕ್ಕಣ್ಣವರ ಪರಿಚಯಿಸಿದರು. ಡಾ. ನಾರಾಯಣ ನಾಯ್ಕ ನಿರೂಪಿಸಿದರು. ಡಾ. ಮಹಾಂತೇಶ ದುರಗಣ್ಣವರ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
