ಮೇಯರ್ ಪ್ರೀತಿ ಕಾಮಕರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಮೈಕ್ ಹಾಗೂ ಎಸಿ ವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿರುವುದು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಸಭೆಯಲ್ಲಿ ಮೈಕ್ ಕೆಲಸ ಮಾಡದೆ ಸದಸ್ಯರು ಪರದಾಡಿದ ಹಿನ್ನೆಲೆಯಲ್ಲಿ, ಸ್ವತಃ ವಿಪಕ್ಷ ಸದಸ್ಯರೇ ತಮ್ಮದೇ ಆದ ಮೈಕ್ ಸಿಸ್ಟಮ್ ತಂದು ಸಭಾಂಗಣದಲ್ಲಿ ಅಳವಡಿಸಿಕೊಂಡು ಚರ್ಚೆ ನಡೆಸಿದ ಪ್ರಸಂಗ ನಡೆದಿದೆ.

ಮೇಯರ್ ಪ್ರೀತಿ ಕಾಮಕರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಆರಂಭದಿಂದಲೇ ಮೈಕ್ ಸರಿಯಾಗಿ ಕಾರ್ಯನಿರ್ವಹಿಸದೆ ಸದಸ್ಯರು ಪರದಾಡುವಂತಾಯಿತು. ಸಭೆಯಲ್ಲಿ ಮಾತನಾಡಬೇಕಾದ ಸದಸ್ಯರಿಗೆ ಧ್ವನಿ ಸ್ಪಷ್ಟವಾಗಿ ಕೇಳಿಸದ ಹಿನ್ನೆಲೆಯಲ್ಲಿ ಹಲವು ಬಾರಿ ಮೈಕ್ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಆದರೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯರು ಸ್ವತಃ ಮೈಕ್ ತಂದು ಸಭಾಂಗಣದಲ್ಲಿ ಅಳವಡಿಸಿಕೊಂಡರು.
ವಿಪಕ್ಷ ಸದಸ್ಯರು ಮೈಕ್ ತಂದು ಬಳಸಲಾರಂಭಿಸುತ್ತಿದ್ದಂತೆ ಸಭೆಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ಸದಸ್ಯ ರವಿ ದೋತ್ರೆ, “ಪಾಲಿಕೆಯಲ್ಲಿ ಮೈಕ್ ಹಾಗೂ ಎಸಿ ಕಿರಿಕಿರಿ ಉಂಟಾಗಿರುವುದು ನಮಗೂ ಮುಜುಗರದ ಸಂಗತಿಯಾಗಿದೆ. ವಿಪಕ್ಷ ಸದಸ್ಯರೇ ಮೈಕ್ ವ್ಯವಸ್ಥೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆಯ ಕೌನ್ಸಿಲ್ ಸಭಾಂಗಣದ ಅವ್ಯವಸ್ಥೆಯ ವಿರುದ್ಧವೂ ರವಿ ದೋತ್ರೆ ಆಕ್ರೋಶ ವ್ಯಕ್ತಪಡಿಸಿದರು. “ಸಭಾಂಗಣದಲ್ಲಿ ಇಲಿಗಳು ಓಡಾಡುತ್ತಿವೆ. ಪಾಲಿಕೆಯಂತಹ ಪ್ರಮುಖ ಆಡಳಿತ ವ್ಯವಸ್ಥೆಯ ಸಭಾಂಗಣದಲ್ಲೇ ಇಂತಹ ಪರಿಸ್ಥಿತಿ ಇರುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಇದೇ ವೇಳೆ ಬಿಜೆಪಿ ಸದಸ್ಯ ಸಂದೀಪ್ ಜೀರಗಿಹಾಳ ಮಾತನಾಡಿ, “ಜನರು ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಅನುಮಾನದಿಂದ ನೋಡುವಂತಾಗಿದೆ. ಅಧಿಕಾರಿಗಳ ದರ್ಪದ ಕಾರಣದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇನ್ನು ವಿರೋಧ ಪಕ್ಷದ ಸದಸ್ಯ ಮುಝಮ್ಮಿಲ್ ಢೋಣಿ ಅವರು ನಾವು ಮಹಾಪಾಲಿಕೆ ಆಯುಕ್ತರು ಅಥವಾ ಪರಿಷತ್ತಿನನ್ನು ಅವಮಾನಿಸಬೇಕೆಂದು ಸೌಂಡ್ ಸಿಸ್ಟಮ್ ತೆಗೆದುಕೊಂಡು ಬಂದಿಲ್ಲ. ಸಭೆಯಲ್ಲಿ ಯಾರೂ ಏನು ಮಾತನಾಡುತ್ತಿದ್ದಾರೆಂದು ತಿಳಿಯದ ಹಿನ್ನೆಲೆ ಸಭೆಯನ್ನು ಸರಾಗವಾಗಿ ನಡೆಸಲು ಮೈಕ್ ಸಿಸ್ಟಮ್ ನೀಡುರುವುದಾಗಿ ತಿಳಿಸಿದರು.
