State

ಕಾಂಗ್ರೆಸ್ ಜನತಾ ಜೋಡೋ ಜಾಗೃತಿ ಯಾತ್ರೆ ಆರಂಭ

Share

ಶಿವಮೊಗ್ಗ ಜಿಲ್ಲೆಯ ಐತಿಹಾಸಿಕ ಈಸೂರು ಗ್ರಾಮದಲ್ಲಿ ಕಾಂಗ್ರೆಸ್‌ನ ‘ಜನತಾ ಜೋಡೋ ಜಾಗೃತಿ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಬಿಜೆಪಿ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕಡಿತಗೊಳಿಸಿರುವ ಕುತಂತ್ರ ಹಾಗೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿದರು.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸ್ವಾತಂತ್ರ್ಯ ಗ್ರಾಮವೆಂದು ಘೋಷಿತವಾದ ಈಸೂರಿನಿಂದ ಕಾಂಗ್ರೆಸ್ ಪಕ್ಷದ ‘ಜನತಾ ಜೋಡೋ ಜಾಗೃತಿ ಯಾತ್ರೆ’ ಅಧಿಕೃತವಾಗಿ ಆರಂಭವಾಯಿತು. ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ 1.50 ಕೋಟಿ ಜನರ ಹೆಸರು ಕೈಬಿಡಲಾಗಿದೆ ಎಂದು ಆರೋಪಿಸಿದ ಬಿ.ಕೆ.ಹರಿಪ್ರಸಾದ್, ಕಡಿಮೆ ಅಂತರದಲ್ಲಿ ಸೋತ 69 ಕ್ಷೇತ್ರಗಳಲ್ಲಿ ಈ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಕೇಂದ್ರ ಸರ್ಕಾರ ಬರ ಪರಿಹಾರ ಮತ್ತು ರೈತರ ಸಾಲ ಮನ್ನಾ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ ಅವರು, ಶ್ರೀಮತರ ಸಾಲ ಮನ್ನಾ ಮಾಡುವ ಕೇಂದ್ರವು ಕರ್ನಾಟಕಕ್ಕೆ ನೀಡಬೇಕಾದ 18,000 ಕೋಟಿ ರೂ. ನೆರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿ.ಕೆ. ಹರಿ ಪ್ರಸಾದ ಆಗ್ರಹಿಸಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಧ್ವಜ ಮತ್ತು ಫ್ಲೆಕ್ಸ್‌ಗಳನ್ನು ಕಿತ್ತುಹಾಕಿದ ಕಿಡಿಗೇಡಿಗಳ ಕೃತ್ಯವನ್ನು ಹರಿಪ್ರಸಾದ್ ಕಠಿಣ ಪದಗಳಲ್ಲಿ ಖಂಡಿಸಿದರು. ರಾಜಕೀಯದಲ್ಲಿ ವಿಜಯೇಂದ್ರ ಎಲ್‌ಕೆಜಿಯಲ್ಲಿದ್ದರೆ, ತಾನು ಪಿಎಚ್‌ಡಿ ಮಾಡಿದ್ದೇನೆ ಎಂದು ಎಚ್ಚರಿಸಿದ ಅವರು, ಮುಂಬರುವ ದಿನಗಳಲ್ಲಿ ನಮ್ಮ ಫ್ಲೆಕ್ಸ್ ಹಂಚಿದರೆ ನಿಮ್ಮದೊಂದೂ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಆರ್ಟಿಜಿಎಸ್ ಮೂಲಕ 17 ಕೋಟಿ ರೂ. ಲಂಚ ಪಡೆದ ದಾಖಲೆ ಇದೆ ಎಂದು ಬಿ.ವೈ. ವಿಜಯೇಂದ್ರ ವಿರುದ್ಧ ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ ಎಂದು ಟೀಕಿಸಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಾಧನೆಗಳನ್ನು ಜನರಿಗೆ ತಲುಪಿಸಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

Tags:

error: Content is protected !!