Belagavi

ಬೆಳಗಾವಿ ಗಣೇಶ ವಿಸರ್ಜನಾ ಮೆರವಣಿಗೆಗೆ ಭಾರಿ ಬಂದೋಬಸ್ತ್…ಹೆಜ್ಜೆ ಹೆಜ್ಜೆಗೂ ಪೊಲೀಸ್ ಕಣ್ಣು

Share

ಬೆಳಗಾವಿಯಲ್ಲಿ ಗಣೇಶ ವಿಸರ್ಜನಾ ಮಹೋತ್ಸವವು ಅತ್ಯಂತ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಜರುಗಿಸಲು ಪೊಲೀಸ್ ಇಲಾಖೆಯಿಂದ ಸರ್ವಸಜ್ಜಿತ ಸಿದ್ಧತೆ ಕೈಗೊಳ್ಳಲಾಗಿದೆ. ನಗರದಲ್ಲಿ ಒಟ್ಟು ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹದ್ದಿನ ಕಣ್ಣಿಡಲಾಗಿದೆ ಎಂದು ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ವಿವರ ನೀಡಿರುವ ಕಮಿಷನರ್, ಜಿಲ್ಲೆಯಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಸುಮಾರು 1,000 ಸಿಸಿಟಿವಿ ಕ್ಯಾಮೆರಾಗಳು ಹಾಗೂ 14 ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, 120ಕ್ಕೂ ಅಧಿಕ ಅತಿ ಸೂಕ್ಷ್ಮ ಪ್ರದೇಶಗಳ ಮೇಲೆ ವಿಶೇಷ ಮುನ್ನೆಚ್ಚರಿಕೆ ವಹಿಸಲಾಗಿದೆ. ಗಣೇಶ ವಿಸರ್ಜನೆಗಾಗಿ ಹಿರಿಯ ಐಪಿಎಸ್ ಅಧಿಕಾರಿಗಳಾದ ರವೀಶ್ ಹಾಗೂ ಶ್ರೀನಾಥ್ ಜೋಶಿ ಅವರ ಮಾರ್ಗದರ್ಶನದಲ್ಲಿ, 3 ಡಿಸಿಪಿಗಳು, 6 ಎಸಿಪಿಗಳು, 21 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 153 ಎಸ್‌ಐಗಳು ಸೇರಿದಂತೆ ಬೆಳಗಾವಿ ಹಾಗೂ ಹೊರಗಿನ ಜಿಲ್ಲೆಗಳಿಂದ ಒಟ್ಟು 4,000 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಸ್ಟ್ರೈಕಿಂಗ್ ಪಾರ್ಟಿಯಲ್ಲಿ 10 ಕೆಎಸ್‌ಆರ್‌ಪಿ, 9 ಸಿಆರ್ ಹಾಗೂ ಒಂದು ರಾಪಿಡ್ ಆಕ್ಷನ್ ಫೋರ್ಸ್ (RAF) ತುಕಡಿಗಳನ್ನು ನಿಯೋಜಿಸುವುದರ ಜೊತೆಗೆ ಕಿಡಿಗೇಡಿಗಳನ್ನು ಹತ್ತಿಕ್ಕಲು ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್ ಅನ್ನು ಸಕ್ರಿಯಗೊಳಿಸಲಾಗಿದೆ. ನಗರ ಮಿತಿಗಳು ಹಾಗೂ ಕಪಿಲೇಶ್ವರ ಹೊಂಡ ಸೇರಿದಂತೆ ಒಟ್ಟು 1,056 ಗಣೇಶ ಮೂರ್ತಿಗಳು ವಿಸರ್ಜನೆಯಾಗಲಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದೆ ಹಬ್ಬವನ್ನು ಮುಗಿಸಲು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ ಎಂದರು.

ಹಬ್ಬದ ಆಚರಣೆಯ ಸಂದರ್ಭದಲ್ಲಿ ಕಾನೂನು ಮತ್ತು ಸುವರ್ಣತೆಯನ್ನು ಕಾಯ್ದುಕೊಳ್ಳಲು ಹೈಕೋರ್ಟ್ ತೀರ್ಪಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ನಿಗದಿತ ಶಬ್ದ ಮಿತಿಯನ್ನು (ಡೆಸಿಬಲ್ ಮಟ್ಟ) ಮೀರುವವರ ಮೇಲೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘಿಸುವವರ ಮೇಲೆ ವಿಶೇಷ ತಂಡಗಳು ನಿರಂತರ ನಿಗಾವಿಡಲಿವೆ. ಡಿಜೆ ಸೌಂಡ್ ಸಿಸ್ಟಮ್ ಬಳಕೆಯ ಮೇಲೆ ನಿಷೇಧವಿದ್ದು, ಯಾರಾದರೂ ಡಿಜೆ ಮುಂದೆ ಬಂದು ಅಸಭ್ಯವಾಗಿ ನೃತ್ಯ ಮಾಡುವುದು, ಮದ್ಯಪಾನ ಮಾಡಿ ಬರುವುದು ಅಥವಾ ಮಂಡಳಿಗಳ ನಡುವಿನ ಸ್ಪರ್ಧೆಯ ವೇಳೆ ವಾಹನಗಳನ್ನು ಬಿಟ್ಟು ಬೇರೆ ರೀತಿಯಲ್ಲಿ ವರ್ತಿಸಿದರೆ ಕಠಿಣ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಅಲ್ಲದೆ, ಕಣ್ಣುಗಳಿಗೆ ಹಾಗೂ ಮಕ್ಕಳ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿರುವ ಲೇಸರ್ ಲೈಟ್ಸ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಿಯಮ ಮೀರಿ ಬಳಸುವವರ ಲೇಸರ್ ಲೈಟ್‌ಗಳನ್ನು ಜಪ್ತಿ ಮಾಡುವುದಾಗಿ ತಿಳಿಸಲಾಗಿದೆ. ಸತತ 36 ಗಂಟೆಗಳ ಕಾಲ ಹಗಲಿರುಳು ಶ್ರಮಿಸುವ ಮೂಲಕ ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಡಿಸಿಪಿ ನಾರಾಯಣ್ ಬರಮನಿ ಅವರು ಗಣೇಶ ಮಂಡಳಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚಿಸಲಾಗಿದೆ. ಮೆರವಣಿಗೆಯ ಸಮಯದಲ್ಲಿ ಯಾವುದೇ ಅಂತರ ಬಾರದಂತೆ ಎಚ್ಚರ ವಹಿಸಿ ಸಿಬ್ಬಂದಿ ಜೊತೆಯಲ್ಲಿರಲು ತಿಳಿಸಲಾಗಿದ್ದು, ಮೇಲ್ವಿಚಾರಣೆಗಾಗಿ ಡಿಎಸ್‌ಪಿ, ಇನ್ಸ್‌ಪೆಕ್ಟರ್‌ ಹಾಗೂ ಪಿಎಸ್‌ಐ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಿಸರ್ಜನಾ ಸ್ಥಳಗಳಲ್ಲಿ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದರೊಂದಿಗೆ, ಪ್ರತಿ ಗಲ್ಲಿಯಲ್ಲೂ ಪೊಲೀಸರ ಕಣ್ಗಾವಲಿಟ್ಟು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ನಂತರ ಬೆಳಗಾವಿ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭಗೊಂಡ ರೂಟ್ ಮಾರ್ಚ್’ಗೆ ಕಮಿಷ್ನರ್ ಪ್ರಕಾಶ್ ನಿಕಮ್ ಅವರು ಚಾಲನೆಯನ್ನು ನೀಡಿದರು. ಈ ಪಥಸಂಚಲನವು ಗಣೇಶ ವಿಸರ್ಜನೆಯ ವೇಳೆ ನಗರದ ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ ಎಂಬ ಖಡಕ್ ಎಚ್ಚರಿಕೆಯನ್ನು ನೀಡಿತು.

Tags:

error: Content is protected !!