ಕಳೆದ ಮೂರು ವರ್ಷಗಳಿಂದ ಈ ವರ್ಷ ಮಳೆಯ ಪ್ರಮಾಣ ಅತಿ ಕಡಿಮೆಯಾಗಿದೆ. ಇದರಿಂದ ರೈತರು ಯಾವುದೇ ಬಿತ್ತನೆ ಮಾಡದೆ ಜಮೀನುಗಳು ಖಾಲಿ ಉಳಿದಿವೆ. ಇಂತಹ ಗಂಭೀರ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕಾಗವಾಡ ತಾಲೂಕನ್ನು ಬರಪೀಡಿತ ತಾಲೂಕಿನ ಪಟ್ಟಿಯಿಂದ ಕೈಬಿಟ್ಟಿದೆ. ಜಿಲ್ಲೆಯ ಒಂಬತ್ತು ತಾಲೂಕುಗಳು ಬರಪೀಡಿತವಾಗಿವೆ ಎಂದಾದರೆ, ನಮ್ಮ ತಾಲೂಕಿನಲ್ಲಿ ಯಾವಾಗ ಮಳೆಯಾಗಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ್ ಆರೋಪಿಸಿದರು. ಇದರ ನಿಷೇಧವಾಗಿ ಮಂಗಳವಾರ ದಿನಾಂಕ 22ರಂದು ಬೆಳಿಗ್ಗೆ 10 ಗಂಟೆಗೆ ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ರೈತರು ಒಂದುಗೂಡಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಮಾಜಿ ಸಚಿವ ಶ್ರೀಮಂತ ಪಾಟೀಲರ ಕೆಂಪವಾಡದ ಕಚೇರಿಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ್ ಕುಲಕರ್ಣಿ, ಕಾಗವಾಡ ತಾಲೂಕ ಮಂಡಲ ಅಧ್ಯಕ್ಷ ಗಣೇಶವಾಡಿ, ಹಿರಿಯ ನ್ಯಾಯವಾದಿ ನಿಂಗಪ್ಪ ಕೊಕಲೆ, ದಾದಾ ಪಾಟೀಲ್ ಹಾಗೂ ಕಾರ್ಯಕರ್ತರೊಂದಿಗೆ ಸಭೆ ಸೇರಿ ಪ್ರತಿಭಟನೆಯ ನಿರ್ಣಯ ಕೈಗೊಂಡರು.
ಕಳೆದ ಅನೇಕ ವರ್ಷಗಳ ನಂತರ ಈ ವರ್ಷ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಕುಡಿಯುವ ನೀರು, ಜನ-ಜಾನುವಾರುಗಳಿಗೆ ಮೇವಿನ ಸಮಸ್ಯೆ ಹಾಗೂ ಸಾಮಾನ್ಯ ಜನ-ರೈತರಿಗೆ ಕೂಲಿ ಸಮಸ್ಯೆ ಗಂಭೀರವಾಗಿದೆ. ಇದನ್ನು ಪರಿಗಣಿಸದೆ ಕಾಗವಾಡ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಕೇಳಿ ಆಶ್ಚರ್ಯ ಹಾಗೂ ಒಂದು ರೀತಿ ಮನುಷ್ಯನಲ್ಲಿ ಕ್ರೋಧ ಉತ್ಪನ್ನವಾಗಿದೆ. ಈ ಪರಿಶೀಲನೆ ಮಾಡಿದ ಅಧಿಕಾರಿಗಳು ಯಾರು ಎಂದು ಪ್ರಶ್ನಿಸಿ, ಅವರನ್ನು ಮುಂದೆ ತನ್ನಿ ನಾನು ಪ್ರಶ್ನೆಗಳನ್ನು ಕೇಳುತ್ತೇನೆ ಎಂದು ಹೇಳಿದರು.
ಮಂಗಳವಾರದಂದು ಸಾವಿರಾರು ರೈತರು ಕಾಗವಾಡದಲ್ಲಿ ಹಮ್ಮಿಕೊಂಡಿರುವ ಉಗ್ರ ಪ್ರತಿಭಟನೆಗೆ ಆಹ್ವಾನಿಸಿದ್ದಾರೆ.
ಬಿಜೆಪಿ ಪಕ್ಷದ ಮಾಜಿ ಮಂಡಲ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣಾ ಪಾರ್ಶೆಟ್ಟಿ, ರಾಕೇಶ್ ಪಾಟೀಲ್, ಈಶ್ವರ್ ಕುಂಬಾರ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು.
