ಬೆಳಗಾವಿ ನಗರದ ಮಜಗಾವ ಗ್ರಾಮದ ಭಗವಾನ್ ಶ್ರೀ 1008 ಆದಿನಾಥ್ ದಿಗಂಬರ ಜೈನ ಮಂದಿರದಲ್ಲಿ ಜೈನ ಧರ್ಮದ ಮಹತ್ವದ ದಶಲಕ್ಷಣ ಹಾಗೂ ಶೋಡಶಕಾರಣ ಪರ್ವವು ಅತ್ಯಂತ ಅದ್ಧೂರಿ ಹಾಗೂ ಧಾರ್ಮಿಕ ಸಡಗರದಿಂದ ಜರುಗುತ್ತಿದೆ. ವರ್ಷಕ್ಕೊಮ್ಮೆ ಬರುವ ಈ ಪವಿತ್ರ ಪರ್ವದಲ್ಲಿ ಪಾಪ ಕರ್ಮಗಳನ್ನು ಕಳೆಯಲು ಧರ್ಮ ಬಂಧುಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.



ಬೆಳಗಾವಿಯ ಮಜಗಾವ ಗ್ರಾಮದ ಭಗವಾನ್ ಶ್ರೀ 1008 ಆದಿನಾಥ್ ದಿಗಂಬರ ಜೈನ ಮಂದಿರದಲ್ಲಿ ನಡೆಯುತ್ತಿರುವ ದಶಲಕ್ಷನ ಮತ್ತು ಶೋಡಶಕಾರಣ ಪರ್ವದ ನಿಮಿತ್ತ ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ವಿಶೇಷ ಪೂಜಾ ಅಭಿಷೇಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗುತ್ತಿವೆ. ಜಿನ ಭಗವಂತರ ಸ್ಥಾಪನೆಯನ್ನು ಪ್ರವೀನ್ ಸುಭಾಷ್ ಪಾಟೀಲ ನೆರವೇರಿಸಿದರೆ, ಭಗವಂತರಿಗೆ ಗಂಧಭಿಷೆಕ ಹಾಗೂ ಪುಷ್ಪ ವೃಷ್ಟಿಯನ್ನು ಸಂಜೀವ್ ಸಾವಂತ್ ಪೂಜಾರ ಪರಿವಾರದವರು ಮತ್ತು ಶಾಂತಿಧಾರೆಯನ್ನು ರಾಜು ಚಿಂತಪ್ಪ ಸಾತಗೌಡ ಅವರು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಈ ಧಾರ್ಮಿಕ ಆಚರಣೆಗಳಿಂದ ಜೈನ ಧರ್ಮದ ಪ್ರಭಾವನೆ ಹೆಚ್ಚುವುದರೊಂದಿಗೆ ಭಕ್ತರ ಪಾಪ ಕರ್ಮಗಳು ನಷ್ಟವಾಗಲಿವೆ ಎಂದು ಪೂಜಾ ಕೈಂಕರ್ಯಗಳು ಸಾರುತ್ತಿವೆ.

ಹದಿನಾರು ದಿನಗಳ ಕಾಲ ನಿರಂತರವಾಗಿ ನಡೆಯುವ ಈ ಧರ್ಮ ಪರ್ವದಲ್ಲಿ ಜೈನ ಬಂಧುಗಳು ತಮ್ಮ ಪರಿವಾರ ಸಮೇತವಾಗಿ ಭಾಗವಹಿಸಿ ಅಪಾರ ಪುಣ್ಯ ಸಂಪಾದಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದ ಸಂದರ್ಭದಲ್ಲಿ ಎಲ್ಲಾ ಜೈನ ಬಂಧುಗಳು ಭಕ್ತಿಯ ಪರಾಕಾಷ್ಠೆಯಿಂದ ಸಮವಶರಣದ ಸುತ್ತ ನೃತ್ಯಗೈದು ಜಿನ ಭಗವಂತರಿಗೆ ಪೂಜೆ ಸಲ್ಲಿಸಿದರು. ಪ್ರತಿಷ್ಠಾಚಾರ್ಯ ಸಚಿನ್ ಅಜಿತ್ ಪಾಟೀಲ ಹಾಗೂ ವಿಧಾನಾಚಾರ್ಯ ನಿಲೇಶ್ ಉಪಾಧ್ಯೆ ಅವರು ಧಾರ್ಮಿಕ ವಿಧಿ-ವಿಧಾನಗಳನ್ನು ಅತ್ಯಂತ ಶಿಸ್ತಿನಿಂದ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಾರಿಸ್ ಪಾಟೀಲ, ವಿನೋದ್ ಪಾಟೀಲ, ಅಭಯ್ ದೇಸಾಯಿ, ಡಾ. ನಾಗರಾಜ ಪಾಟೀಲ ಸೇರಿದಂತೆ ಪಂಚ್ ಕಮಿಟಿ, ಚತುರ್ಮಾಸ್ ಕಮಿಟಿ ಹಾಗೂ ವಿವಿಧ ಯುವಕ-ಮಹಿಳಾ ಮಂಡಳದವರು ಉಪಸ್ಥಿತರಿದ್ದರು.

